Updated By: Priyalachhi
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ)ಗೆ ಡಿಸೆಂಬರ್ 7ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಸಿ, ಅಂದೇ ಫಲಿತಾಂಶ ಪ್ರಕಟಿಸಬೇಕು ಎಂದು ಕೆಎಸ್ಸಿಎ ಚುನಾವಣಾಧಿಕಾರಿಗಳಿಗೆ ಹೈಕೋರ್ಟ್ ಇಂದು ನಿರ್ದೇಶನ ನೀಡಿತು.
ಚುನಾವಣಾ ದಿನಾಂಕವನ್ನು ನವೆಂಬರ್ 30ರ ಬದಲಿಗೆ ಡಿಸೆಂಬರ್ 30ಕ್ಕೆ ಮುಂದೂಡಿದ ಚುನಾವಣಾಧಿಕಾರಿಯೂ ಆಗಿರುವ ನಿವೃತ್ತ ಐಎಎಸ್ ಅಧಿಕಾರಿ ಡಾ.ಬಿ.ಸಬರಾಜು ಅವರು ನವೆಂಬರ್ 17ರಂದು ಹೊರಡಿಸಿದ್ದ ಪತ್ರ ರದ್ದು ಕೋರಿ ಕೆಎಸ್ಸಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಈಗಾಗಲೇ ನಿಗದಿಪಡಿಸಿದ್ದ ದಿನಾಂಕದಂದು ಚುನಾವಣೆ ನಡೆಸಲು ನಿರ್ದೇಶನ ಕೋರಿ ಕೆಎಸ್ಸಿಎ ಸದಸ್ಯ ಬಿ.ಕೆ.ರವಿ ಎಂಬವರು ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾ.ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ, ಚುನಾವಣೆಯನ್ನು ನವೆಂಬರ್ 30ರ ಬದಲಿಗೆ ಡಿಸೆಂಬರ್ 30ಕ್ಕೆ ಮುಂದೂಡಿ ನವೆಂಬರ್ 17ರಂದು ಹೊರಡಿಸಿದ್ದ ಪತ್ರವನ್ನು ರದ್ದುಪಡಿಸಿ ಆದೇಶಿಸಿದೆ.
ಅಲ್ಲದೆ, ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸುಭಾಶ್ ಬಿ.ಅಡಿ ಅವರ ಮೇಲ್ವಿಚಾರಣೆಯಲ್ಲಿ ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ನಿರ್ದೇಸಿಸಿ ವಿಚಾರಣೆಯನ್ನು ಮುಂದೂಡಿದೆ.
ಪ್ರಸ್ತುತ ಜಾರಿಯಲ್ಲಿರುವ ಬೈಲಾದ ಅಂಶಗಳ ಕುರಿತ ವಿವಿಧ ವ್ಯಾಖ್ಯಾನಗಳ ಕುರಿತಂತೆ ಪ್ರಭಾವಕ್ಕೊಳಗಾಗದೆ ಪ್ರಸ್ತುತ ಇರುವ ಬೈಲಾ ನಿಯಮಗಳ ಅನುಸಾರವಾಗಿ ಚುನಾವಣೆ ನಡೆಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಕೆಎಸ್ಸಿಎಗೆ ನಡೆಯುವ ಚುನಾವಣೆಗೆ ಈಗಾಗಲೇ ನಾಮಪತ್ರಗಳು ಸಲ್ಲಿಕೆ ಮಾಡಿರುವುದರಿಂದ ಅದರಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ ಅವಕಾಶವಿಲ್ಲ. ಆದರೆ, ಚುನಾವಣೆಗಾಗಿ ಅರ್ಜಿ ಸಲ್ಲಿಸಿರುವವರ ನಾಮಪತ್ರಗಳನ್ನು ನವೆಂಬರ್ 17ರ ಒಳಗಾಗಿ ಪರಿಶೀಲನೆ ಪ್ರಕ್ರಿಯೆ ನಡೆಯಬೇಕಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ, ಜೊತೆಗೆ ಅವಧಿ ಮೀರಿದೆ. ಆದ್ದರಿಂದ ನವೆಂಬರ್ 24ರ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಸಬೇಕು. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ನವೆಂಬರ್ 24ರಂದು ಪ್ರಕಟಿಸಬೇಕು.



