Updated By: Priyalachhi
ಶಿವಮೊಗ್ಗ: ಭಾರತ ಮಹಿಳಾ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಗೆದ್ದ ಖುಷಿಯ ಮಧ್ಯೆ ದೇಶದ ವನಿತೆಯರ ಅಂಧರ T20 ತಂಡವೂ ವಿಶ್ವಕಪ್ ಮುಡಿಗೇರಿಸಿಕೊಂಡಿದೆ.
ಅಂಧ ವನಿತೆಯರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಅನೇಕ ಗಣ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ನವೆಂಬರ್ 23ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ದೀಪಿಕಾ ಟಿ.ಸಿ. ಅವರ ನಾಯಕತ್ವದ ಭಾರತ ತಂಡ ನೇಪಾಳವನ್ನು ಏಳು ವಿಕೆಟ್‌ಗಳಿಂದ ಮಣಿಸಿ ಐತಿಹಾಸಿಕ ವಿಜಯ ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಭಾರತ ತಂಡ ನೇಪಾಳವನ್ನು 114/5 ರನ್‌ಗಳಿಗೆ ಅಲೌಟ್ ಮಾಡಿತು. ನಂತರ ಬ್ಯಾಟಿಂಗ್ ಮಾಡಿದ ಭಾರತೀಯರು ಕೇವಲ 12 ಓವರ್‌ಗಳಲ್ಲಿ 117/3 ರನ್ ಬಾರಿಸಿ, ಚೊಚ್ಚಲ T20 ವಿಶ್ವಕಪ್ ಎತ್ತಿಹಿಡಿದರು.
ವಿಶ್ವಕಪ್ ಗೆದ್ದ ತಂಡದಲ್ಲಿ ರಾಜ್ಯದ ಮೂವರಿದ್ದರು. ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬರುವೆ ಗ್ರಾಮದ ಕಾವ್ಯ ಸಹ ಒಬ್ಬರು. ಕಾವ್ಯ ತಮ್ಮ ಆಲ್‌ರೌಂಡ್ ಆಟದಿಂದ ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ. ಏಳು ಪಂದ್ಯಗಳ ವಿಶ್ವಕಪ್ ಟೂರ್ನಿಯಲ್ಲಿ ಮೂರು ಪಂದ್ಯಗಳಲ್ಲಿ ಇವರು ಉತ್ತಮವಾಗಿ ಆಟವಾಡಿದ್ದರು.
ಕಾವ್ಯಾ ಅವರು ರಿಪ್ಪನ್ ಪೇಟೆಯ ಬಳಿಯ ಬರುವೆ ಗ್ರಾಮದ ಆಚಾರ್ ಕೇರಿ ನಿವಾಸಿಗಳಾದ ಜಯಮ್ಮ ಮತ್ತು ವೆಂಕಟೇಶ್ ಆಚಾರ್ ದಂಪತಿಯ ಪುತ್ರಿ. ಆಚಾರ್ ದಂಪತಿಗೆ ಐವರು ಹೆಣ್ಣು ಮಕ್ಕಳು. ಇವರಲ್ಲಿ ಕಾವ್ಯ ನಾಲ್ಕನೆಯವರು. ಮೂವರು ಅಕ್ಕಂದಿರು ಹಾಗೂ ಓರ್ವ ತಂಗಿ ಸೇರಿ ಎಲ್ಲರೂ ಆರೋಗ್ಯವಾಗಿದ್ದು, ಕಾವ್ಯ ಅವರಿಗೆ ದೃಷ್ಟಿ ದೋಷವಿದೆ.
ಕಾವ್ಯಾರ ಕ್ರೀಡಾ ಜೀವನಕ್ಕೆ ಶಿವಮೊಗ್ಗದ ಅಂಧರ ವಿಕಾಸ ಕೇಂದ್ರದ ಶಿಕ್ಷಕರಾದ ಸುರೇಶ್ ಹಾಗೂ ಈಶ್ವರ್ ನೀಡಿದ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಬೆಂಗಳೂರಿನ ಶಿಕಾ ಶೆಟ್ಟಿ ಮತ್ತು ಚಂದು ನೀಡಿದ ಕೋಚಿಂಗ್ ಅವರ ಆಟಕ್ಕೆ ಶಕ್ತಿ ತುಂಬಿದೆ. ಜ್ಞಾನಭಾರತಿ ಎಜುಕೇಶನ್ ಸೊಸೈಟಿಯ ಸಹಕಾರ ಸಹ ಕಾವ್ಯಾರ ಕ್ರೀಡಾ ಬೆಳವಣಿಗೆಯಲ್ಲಿ ಮಹತ್ವರ ಪಾತ್ರವಹಿಸಿದೆ.



