ಉಡುಪಿ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್​ಗೆ ಅಭಿನವ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ನೀಡಿದ ಕೃಷ್ಣಮಠ

0
15

Updated By: Priyalachhi

ಉಡುಪಿ: ಖ್ಯಾತ ನಟ, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್​​ ಕಲ್ಯಾಣ್ ಅವರು​ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸೋಮವಾರ ನಡೆದ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ರಥ ಬೀದಿಗೆ ಆಗಮಿಸಿ ಕನಕನ ಗುಡಿಗೆ ಮಾಲಾರ್ಪಣೆ ಮಾಡಿ ಕನಕನ ಕಿಂಡಿಯ ಮೂಲಕ ದೇವರ ದರ್ಶನ ಮಾಡಿದರು. ಬಳಿಕ ಅನಂತೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜಿ ಸಲ್ಲಿಸಿದರು. ಪರ್ಯಾಯ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಪವನ್ ಕಲ್ಯಾಣ್​ಗೆ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಮಾಡಿಸಿ, ಸುವರ್ಣತೀರ್ಥ ಮಂಟಪದಲ್ಲಿ ಪ್ರಸಾದ ನೀಡಿದರು. ಬಳಿಕ ಗೀತಾ ಮಂದಿರಕ್ಕೆ ತೆರಳಿದ ಡಿಸಿಎಂ, ಧ್ಯಾನ ಮಂದಿರದ ಅನಂತಪದ್ಮನಾಭ ಸ್ವಾಮಿ ಮೂರ್ತಿ ದರ್ಶನ ಮಾಡಿಸಿದರು.

ಸಂಜೆ ಮಠದ ರಾಜಾಂಗಣದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪರ್ಯಾಯ ಮಠದ ವತಿಯಿಂದ ಅಭಿನವ ಶ್ರೀ ಕೃಷ್ಣದೇವರಾಯ ಪ್ರಶಸ್ತಿಯನ್ನು ಪವನ್ ಕಲ್ಯಾಣ್​ಗೆ ನೀಡಿ ಗೌರವಿಸಲಾಯಿತು. ಧರ್ಮರಕ್ಷಣೆಯ ಕಾರ್ಯವನ್ನು ಮಾಡುತ್ತಿರುವುದರಿಂದ ಈ ಬಿರುದು ನೀಡುತ್ತಿದ್ದೇವೆ ಎಂದು ಸ್ವಾಮೀಜಿ ಆಶೀರ್ವಚನದಲ್ಲಿ ಹೇಳಿದರು.

ಯುದ್ಧಕಾಲಕ್ಕೆ ಭಗವದ್ಗೀತೆಯೆ ಪರಿಹಾರ: “ಯುವ ಜನರ ಒತ್ತಡ ಪರಿಹಾರಕ್ಕೆ ಭಗವದ್ಗೀತೆಯೇ ಏಕೈಕ ಮಾರ್ಗ. ಗೋವು ರಕ್ಷಣೆ ವಿಚಾರದಲ್ಲಿ ಅನ್ಯ ಧರ್ಮವನ್ನು ದೂರುವ ಬದಲು, ಪ್ರತಿ ಕುಟುಂಬ ಒಂದು ಗೋವನ್ನು ಸಾಕಿ ಎಂದು ಪವನ್ ಕಲ್ಯಾಣ್ ಕರೆ ನೀಡಿದರು.

ರಾಜಕೀಯದಲ್ಲಿ ಸೋಲು ಗೆಲುವು ನನಗೆ ಮುಖ್ಯ ಅಲ್ಲ. ಯಾಕಂದ್ರೆ ಭಗವದ್ಗೀತೆ ನಿಷ್ಕಾಮ ಕರ್ಮವನ್ನು ನನಗೆ ಬೋಧಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್​ಗೆ ಪ್ರಧಾನಿ ಮೋದಿ ಭಗವದ್ಗೀತೆಯನ್ನು ನೀಡಿದ್ದಾರೆ. ಯುದ್ಧಕಾಲಕ್ಕೆ ಇದೇ ಪರಿಹಾರ” ಎಂದರು.

ಡಿ.13ಕ್ಕೆ ವಿಶ್ವಶಾಂತಿ ಸಮಾವೇಶ: ಡಿ.6 ರಂದು ಗೀತಾ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶ್ರೀಸುಗುಣೇಂದ್ರ ತೀರ್ಥ ಶ್ರೀಗಳು, “ವಿಶ್ವಗೀತಾ ಪರ್ಯಾಯ ಮಹೋತ್ಸವದ ಅಂಗವಾಗಿ ಡಿ.13ರಂದು ರಾಜಾಂಗಣದಲ್ಲಿ ವಿಶ್ವಶಾಂತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ಅಮೆರಿಕದ ವರ್ಲ್ಡ್ ರಿಲೀಜಿಯಸ್ ಫಾರ್ ಪೀಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ವಿಲಿಯಂ ಎಫ್. ವಿಂಡ್ಲೆ, ಒನ್ ವರ್ಲ್ಡ್ ಒನ್ ಫ್ಯಾಮಿಲಿ ಸಂಸ್ಥಾಪಕ ಸದ್ಗುರು ಶ್ರೀಮಧುಸೂದನ ಸಾಯಿ ಹಾಗೂ ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ.ಅಬ್ದುಲ್ ನಝೀರ್ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದ್ದರು.

sambrama prabha editor suresh kt

LEAVE A REPLY

Please enter your comment!
Please enter your name here