ಉದ್ದೇಶ ಪೂರ್ವಕವಾಗಿ ಹತ್ಯೆ ಮಾಡಲಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.

0
66

Updated By: Priyalachhi 

ಬಳ್ಳಾರಿ: “ಬ್ಯಾನರ್​​​​​​ ಗಲಾಟೆಯಲ್ಲಿ ಕಾಂಗ್ರೆಸ್​​ ಕಾರ್ಯಕರ್ತ ರಾಜಶೇಖರ್​​​​ ರೆಡ್ಡಿ ಅವರನ್ನು ಉದ್ದೇಶ ಪೂರ್ವಕವಾಗಿ ಹತ್ಯೆ ಮಾಡಲಾಗಿದೆ” ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಜನಾರ್ದನ ರೆಡ್ಡಿ ಅವರ ನಿವಾಸದಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಘಟನೆಯ ವಿಡಿಯೋ ರಿಲೀಸ್ ಮಾಡಲಾಯಿತು. ಈ ವೇಳೆ ಜನಾರ್ದನ ರೆಡ್ಡಿ ಮಾತನಾಡಿ, “ರೆಡ್ಡಿ ಜೊತೆಗೆ ನಗರ ಶಾಸಕ ಭರತ್ ರೆಡ್ಡಿ ಆಪ್ತ ಚಾನಾಳ ಶೇಖರ್ ಅವರನ್ನು ಹತ್ಯೆ ಮಾಡಿ ಜನಾರ್ದನ​ ರೆಡ್ಡಿ ತಲೆಗೆ ಕಟ್ಟುವ ಪ್ರಯತ್ನ ನಡೆದಿತ್ತು. ಆದರೆ, ಶೇಖರ್ ಅದೃಷ್ಟವಶಾತ್ ಪಾರಾದ. ಇದರ ರೂವಾರಿಯಾದ ನಗರ ಶಾಸಕ ಭರತ್ ರೆಡ್ಡಿ ಹಾಗೂ ಆಪ್ತ ಸತೀಶ್ ರೆಡ್ಡಿ ಅವರನ್ನು ಕೂಡಲೇ ಬಂಧಿಸಬೇಕು” ಎಂದು ಒತ್ತಾಯಿಸಿದರು.

“ಗಾಂಜಾ ಸೇವನೆ ಮಾಡಿದರೋ, ಮದ್ಯ ಸೇವಿಸಿದರೋ ಗೊತ್ತಿಲ್ಲ. ನನ್ನ ನಿವಾಸದ ಎದುರು ನಡೆದ ಗಲಾಟೆಯಲ್ಲಿ ನಾನು ಒಂದು ಕರೆ ಕೊಟ್ಟರೆ ಇಡೀ ಬಳ್ಳಾರಿ ಸುಟ್ಟು ಹೋಗುತ್ತಿತ್ತು. ಮನಸ್ಸು ಮಾಡಿದ್ರೆ ಜನಾರ್ದನ​ ರೆಡ್ಡಿ ಮನೆ ಸುಟ್ಟು ಹೋಗುತ್ತಿತ್ತು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿಕೆ ನೀಡಿದ್ದು, ಘಟನೆಯ ರೂವಾರಿ ಭರತ್ ರೆಡ್ಡಿ ಎಂತಹ ವ್ಯಕ್ತಿ ಎನ್ನುವುದು ಅವರ ಹೇಳಿಕೆ ಸಾಕ್ಷಿಕರಿಸುತ್ತದೆ” ಎಂದು ಜನಾರ್ದನ ರೆಡ್ಡಿ ಹೇಳಿದರು.

“ಶಾಸಕ ಭರತ್​ ರೆಡ್ಡಿ ಹಾಗೂ ಆಪ್ತ ಸತೀಶ್ ರೆಡ್ಡಿ ನನ್ನನ್ನು ಹತ್ಯೆ ಮಾಡಲು ವ್ಯವಸ್ಥಿತ ಸಂಚು ರೂಪಿಸಿದ್ದರು. ಗಲಾಟೆ ವೇಳೆ ಸತೀಶ್ ರೆಡ್ಡಿ ಗನ್ ಮ್ಯಾನ್, ಪೋಲೀಸರು ನಡೆಸಿದ ಲಾಠಿ ಚಾರ್ಜ್​ ವೇಳೆ ನೇರವಾಗಿ ರಾಜಶೇಖರ್ ರೆಡ್ಡಿ ಅವರಿಗೆ ಗುಂಡು ಹಾರಿಸಿ, ಮತ್ತೆ ಗಾಳಿಯಲ್ಲಿ ಇನ್ನೊಂದು ಗುಂಡು ಹಾರಿಸಿದ್ದ. ಘಟನೆ ವೇಳೆ ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಈ ವೇಳೆ ಶಾಸಕ ಭರತ್ ರೆಡ್ಡಿ ಆಪ್ತ ಚಾನಾಳ ಅವರ ಹತ್ಯೆ ಮಾಡುವ ಸಂಚು ರೂಪಿಸಿದ್ದರು. ಅದೃಷ್ಟಕ್ಕೆ ಅದು ವಿಫಲವಾಯಿತು. ಘಟನೆಯನ್ನು ಜನಾರ್ದನ​ ರೆಡ್ಡಿ ಹಾಗೂ ಶ್ರೀರಾಮುಲು ಅವರ ಮೇಲೆ ಹೊರಿಸುವ ಸಂಚು ರೂಪಿಸಿದ್ದ ಭರತ್ ರೆಡ್ಡಿ ಅವರ ಉದ್ದೇಶ ಈಡೇರಲಿಲ್ಲ”.

“ಅಮಾಯಕ ವ್ಯಕ್ತಿ ಬಲಿಯಾದ. ಕೂಡಲೇ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಆಪ್ತ ಸತೀಶ್ ರೆಡ್ಡಿ ಹಾಗೂ ಸಹಚರರನ್ನು ಬಂಧಿಸಬೇಕು. ಅರಸು ಅವರ ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಶಾಸಕರನ್ನು ಬಂಧಿಸಬೇಕು.. ಇಲ್ಲದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ರೆಡ್ಡಿ ಹಾಗೂ ಲಿಂಗಾಯತ ಸಮಾಜದವರು ಬಿಜೆಪಿ ಪರವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆಯಲ್ಲಿ ಎರಡು ಸಮುದಾಯದವರನ್ನು ಹತ್ಯೆ ಮಾಡಿ. ಜನಾರ್ದನ​ ರೆಡ್ಡಿ ಅವರ ತಲೆಗೆ ಕಟ್ಟಬೇಕು ಎನ್ನುವುದು ಭರತ್ ರೆಡ್ಡಿ ಗುರಿಯಾಗಿತ್ತು ಎಂದು ಜನಾರ್ದನ ರೆಡ್ಡಿ ಆರೋಪಿಸಿದರು.

ಜ.17ರಂದು ಪ್ರತಿಭಟನೆ: “ಬಳ್ಳಾರಿ ನಗರದಲ್ಲಿ ಜ.1ರಂದು ನಡೆದ ಅಹಿತಕರ ಘಟನೆಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬ ನಿರ್ಧಾರವನ್ನು ಬಿಜೆಪಿ ಕೋರ್ ಕಮಿಟಿಯಲ್ಲಿ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬಿಜೆಪಿ ಪಕ್ಷದ ವತಿಯಿಂದ ಬಳ್ಳಾರಿ ನಗರದಲ್ಲಿ ಭಾರೀ ಪ್ರತಿಭಟನೆ ಮತ್ತು ಸಮಾವೇಶವನ್ನು ಜನವರಿ 17ರಂದು ಹಮ್ಮಿಕೊಳ್ಳಲಾಗುವುದು” ಎಂದು ಜನಾರ್ದನ ರೆಡ್ಡಿ ಇದೆ ವೇಳೆ ಹೇಳಿದರು.

sambrama prabha editor suresh kt

LEAVE A REPLY

Please enter your comment!
Please enter your name here