ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ದಾವಣಗೆರೆ: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕರೆಸಿ ಅಭಿಮಾನಿಗಳ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯ ಈಡೇರಿಸಿದ್ದಾರೆ.
ಮುಸ್ಲಿಂ ಮತಗಳ ಮೇಲೆ ಜಮೀರ್ ಕಣ್ಣಿಟ್ಟಿದ್ದು, ಪಕ್ಷೇತರ ಅಭ್ಯರ್ಥಿಗಳ ಮನವೊಲಿಸಲು ಕೆಪಿಸಿಸಿ ಬಳಿ ಪಟ್ಟಿ ಕೇಳಿದ್ದಾರೆ. ಅಲ್ಲದೇ, ನೇರವಾಗಿ ಎಸ್.ಎಸ್.ಮಲ್ಲಿಕಾರ್ಜುನ್ ನಿವಾಸಕ್ಕೆ ಭೇಟಿ ನೀಡಿ, ನಾನು-ಮಲ್ಲಣ್ಣ ಚಡ್ಡಿ ದೋಸ್ತ್ಗಳೆಂದು ಕೈ ಹಿಡಿದು ಮೇಲಕ್ಕೆತ್ತಿ ವಿಜಯದ ಸಂಕೇತ ಸೂಚಿಸಿದರು.
ಇದಕ್ಕೂ ಮುನ್ನ ಹುಬ್ಬಳ್ಳಿಯಿಂದ ದಾವಣಗೆರೆಗೆ ಆಗಮಿಸಿದ ಜಮೀರ್ ಅವರನ್ನು ಅಭಿಮಾನಿಗಳು ಬೃಹತ್ ಮೆರವಣಿಗೆ ಮೂಲಕ ಎಸ್.ಎಸ್.ಮಲ್ಲಿಕಾರ್ಜುನ್ ಮನೆಗೆ ಕರೆತಂದರು. ಬಳಿಕ ಮಲ್ಲಿಕಾರ್ಜುನ್ ನಿವಾಸದಲ್ಲಿ ಊಟ ಮಾಡಿ, ಪತ್ರಿಕಾಗೋಷ್ಠಿ ನಡೆಸಿದರು.
ನಾನು-ಮಲ್ಲಿಕಾರ್ಜುನ್ ದೋಸ್ತ್ಗಳು, ಮುನಿಸಿಕೊಂಡಿಲ್ಲ-ಜಮೀರ್: “ಕೇರಳಕ್ಕೆ ಸ್ಟಾರ್ ಕ್ಯಾಂಪೇನರ್ ಆಗಿ ಹೋಗಿದ್ದೆ. ಎಸ್.ಎಸ್.ಮಲ್ಲಿಕಾರ್ಜುನ್ ಅವರ ವಿರುದ್ಧ ನಾನು ಯಾವತ್ತೂ ಮುನಿಸಿಕೊಂಡಿಲ್ಲ. ನನಗೆ ಕೇರಳದಲ್ಲಿ 7ರ ತನಕ ಪ್ರಚಾರ ಮಾಡಲು ವೇಣುಗೋಪಾಲ್ ಹೇಳಿದ್ದರು. ಹಾಗಾಗಿ, ಇದೀಗ ಬಂದಿದ್ದೇನೆ. ನಮ್ಮ ಅಭ್ಯರ್ಥಿ ಸಮರ್ಥ್ ಅವರನ್ನು ಗೆಲ್ಲಿಸಿಕೊಂಡು ಬರ್ತೀನಿ. ನನ್ನನ್ನು ಅಭಿಮಾನಿಗಳು ಕರೆತಂದಿದ್ದು ರೋಡ್ ಶೋ ಥರಾನೇ ಆಯ್ತು. ನೂರಕ್ಕೆ ನೂರರಷ್ಟು ಸಮರ್ಥ್ ಗೆಲ್ಲುತ್ತಾರೆ. ಇವತ್ತು ಒಂದು ದಿನ ದಾವಣಗೆರೆ, ಎರಡು ದಿನ ಬಾಗಲಕೋಟೆಗೆ ಪ್ರಚಾರಕ್ಕಾಗಿ ಹೋಗುತ್ತೇನೆ. ಮತ್ತೆ ಮಲ್ಲಿಕಾರ್ಜುನ್ ಬನ್ನಿ ಎಂದರೆ ಖಂಡಿತಾ ದಾವಣಗೆರೆಗೆ ಬರುತ್ತೇನೆ. ಕಳೆದ ಬಾರಿ ನಾಲ್ವರು ಪಕ್ಷೇತರರಿದ್ದರೂ ಮೂರು ಸಾವಿರ ಓಟ್ ತಗೊಂಡರು. ಈ ಬಾರಿ ಪಕ್ಷೇತರರನ್ನು ಕರೆಸಿ ಮನವೊಲಿಸುತ್ತೇವೆ. ಯಾರು ಬರಲಿ, ಬಿಡಲಿ ದಾವಣಗೆರೆ ದಕ್ಷಿಣ ಕಾಂಗ್ರೆಸ್ ಭದ್ರಕೋಟೆ. ಮುಸ್ಲಿಂ ಮುಖಂಡರಲ್ಲಿ ಸ್ವಲ್ಪ ಅಸಮಾಧಾನ ಇದೆ. ಇನ್ನೂ ನಾಲ್ಕು ದಿನ ಇದೆ, ಸರಿ ಮಾಡುತ್ತೇನೆ” ಎಂದರು.



