Updated By: Priyalachhi
ಬೆಂಗಳೂರು: ಕರಾವಳಿ ಕರ್ನಾಟಕದ ಮೂಲಕ ಬೆಂಗಳೂರು ಮತ್ತು ಗೋವಾದ ಮಡ್ಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸುವಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳವಾರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, ಬೆಂಗಳೂರು ನಗರದಿಂದ ಹಾಸನ- ಮಂಗಳೂರು ಜಂಕ್ಷನ್- ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ವರೆಗೆ ಅತಿವೇಗದ ವಂದೇ ಭಾರತ್ ರೈಲು ಸೇವೆ ಆರಂಭಿಸುವಂತೆ ಕೋರಿದ್ದಾರೆ.
ದೀರ್ಘಕಾಲದಿಂದ ಬಾಕಿ ಉಳಿದಿರುವ ಸಾರ್ವಜನಿಕ ಬೇಡಿಕೆ ಇದಾಗಿದೆ ಮತ್ತು ಈ ಮಾರ್ಗದಲ್ಲಿ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವೇಗದ ರೈಲು ಸೇವೆ ಆರಂಭಿಸಲು ಸರ್ವ ರೀತಿಯ ಅನುಕೂಲಕರ ಮೂಲಸೌಲಭ್ಯಗಳಿವೆ ಎಂದು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.
ಪ್ರಸ್ತಾವಿತ ಈ ಹೈ-ಸ್ಪೀಡ್ ರೈಲು ಸೇವೆಯು ರಾಜ್ಯ ರಾಜಧಾನಿ ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾದ ಕರಾವಳಿ ನಡುವಿನ ರೈಲು ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.



