ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಾಗಿ ಸರ್ಕಾರದ ಮೇಲೆ ಮುಗಿಬಿದ್ದ ಪ್ರತಿಪಕ್ಷ ಬಿಜೆಪಿ: ಶ್ವೇತಪತ್ರ ಬಿಡುಗಡೆಗೆ ಒತ್ತಾಯ

0
35

Updated By: Priyalachhi

ಬೆಳಗಾವಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಜೈಲುಗಳಲ್ಲಿ ಕೈದಿಗಳ ಕೈಯಲ್ಲಿ ಫೋನ್‌ ಬಂದಿದೆ. ಡ್ರಗ್ಸ್‌ ಮಾಫಿಯಾ ವ್ಯಾಪಕವಾಗಿ ಬೆಳೆದಿದೆ. ಪೊಲೀಸರೇ ಕಳ್ಳರಾಗಿ ಬದಲಾಗಿದ್ದಾರೆ. ಕಾಂಗ್ರೆಸ್‌ನ ಎರಡು ವರ್ಷಗಳ ಆಡಳಿತದಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಒತ್ತಾಯಿಸಿದರು.

ಕಾನೂನು ಸುವ್ಯವಸ್ಥೆ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆಗಾರರಿಗೆ, ಭಯೋತ್ಪಾದಕರಿಗೆ ರೆಸಾರ್ಟ್, ಫೈವ್‌ ಸ್ಟಾರ್‌ ಸೌಲಭ್ಯ ನೀಡಲಾಗುತ್ತಿದೆ. ಕೈದಿಗಳು ಬ್ಯಾರಕ್‌ಗೆ ವರ್ಗಾವಣೆ ಮಾಡಿಸಿಕೊಳ್ಳಲು ಜೈಲಧಿಕಾರಿಗಳಿಗೆ ಲಂಚ ನೀಡುತ್ತಾರೆ. ಅದಕ್ಕಾಗಿ ಲಾಬಿಯೂ ನಡೆಯುತ್ತದೆ. ರೌಡಿಶೀಟರ್‌ ಗುಬ್ಬಚ್ಚಿ ಸೀನ ಜೈಲಿನಲ್ಲೇ ಜನ್ಮದಿನ ಆಚರಿಸಿಕೊಂಡ. ಆ ಕೇಕ್‌ ಮೇಲೆ ಹೆಸರು ಬರೆಸಿಕೊಂಡಿದ್ದ. ಅಂತಹ ಕೇಕ್‌ ಜೈಲಿನೊಳಗೆ ಹೇಗೆ ಬಂತು ಎಂದು ತಿಳಿದಿಲ್ಲ. ಭಯೋತ್ಪಾದಕ ಶಕೀಲ್‌ ಮನ್ನಾ ಕೈಯಲ್ಲಿ ಫೋನ್‌ ಇರುವ ವಿಡಿಯೋ ಹೊರಗೆ ಬಂದಿದೆ. ಇದಕ್ಕೂ ಮುನ್ನ ನಟ ದರ್ಶನ್‌ ಕೈಯಲ್ಲಿ ಸಿಗರೇಟ್‌ ಇರುವ ಫೋಟೋ ಬಂದಿತ್ತು. ಪೊಲೀಸ್‌ ಆಯುಕ್ತರು ಪ್ರತಿ ತಿಂಗಳು ಜೈಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ಜೈಲಿನ ನಿಯಮದಲ್ಲೇ ಇದೆ. ಆದರೆ ಈ ರೀತಿ ಭೇಟಿಗಳು ನಡೆದಿಲ್ಲ ಎಂದು ಆರೋಪಿಸಿದರು.

ಪೊಲೀಸರೇ ಕಳ್ಳರಾಗಿದ್ದಾರೆ: ಈಗ ರಾಜ್ಯದಲ್ಲಿ ಪೊಲೀಸರೇ ಕಳ್ಳರಾಗಿದ್ದಾರೆ. ಬೆಂಗಳೂರಿನಲ್ಲಿ 11 ತಿಂಗಳಲ್ಲಿ 130 ಪೊಲೀಸರು ಅಪರಾಧಿಗಳ ಜೊತೆ ಶಾಮೀಲಾಗಿ ಅಮಾನತಾಗಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ ಬ್ಯಾಂಕ್‌ನ 7 ಕೋಟಿ ರೂ. ದರೋಡೆಯಾಗಿದ್ದು, ಅದರ ನೇತೃತ್ವವನ್ನು ಪೊಲೀಸ್‌ ಕಾನ್ಸ್‌ಟೇಬಲ್‌ ವಹಿಸಿಕೊಂಡಿದ್ದ. ಬೀದರ್‌ನಲ್ಲಿ ಬ್ಯಾಂಕ್‌ ಹಣ ಲೂಟಿಯಾದ ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಗಿಲ್ಲ. ಹಿಂದೆ ಅಪರಾಧಿಗಳಿಗೆ ಪೊಲೀಸರ ಭಯ ಇತ್ತು. ಈಗ ಭಯವೇ ಇಲ್ಲ. 23,000 ಸಕ್ರಿಯ ರೌಡಿಗಳು ರಾಜ್ಯದಲ್ಲಿದ್ದಾರೆ. 43,000 ಬೈಕ್‌ಗಳು ಕಳ್ಳತನವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸೈಬರ್‌ ಅಪರಾಧಗಳಲ್ಲಿ 5,474 ಕೋಟಿ ರೂ. ಕಳ್ಳತನವಾಗಿದೆ. ಪೊಲೀಸರು 627 ಕೋಟಿ ರೂ. ವಾಪಸ್‌ ಪಡೆದಿದ್ದಾರೆ. ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳು ಹೆಚ್ಚಿದ್ದು, ಗೃಹ ಇಲಾಖೆ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿಲ್ಲ. ಡ್ರಗ್ಸ್‌ ಮಾಫಿಯಾ ಎಲ್ಲೆಡೆ ಅಧಿಕವಾಗಿದೆ. ಈ ಅಕ್ರಮ ಸರ್ಕಾರದ ಕೈಮೀರಿ ಹೋಗಿದೆ. ಒಂದು ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಬಾಟಲ್‌ ನೀರಿನಲ್ಲಿ ಮಾದಕ ವಸ್ತು ಬೆರೆಸಿ ಸೇವಿಸಿದ್ದಳು. ನಂತರ ಶಿಕ್ಷಕರಿಗೆ ವೆರಿ ಗುಡ್‌ ಎಂದು ಹೇಳುತ್ತಿದ್ದಳು, ವಿಚಾರಿಸಿ ನೋಡಿದಾಗ ಆಕೆ ಮಾದಕ ವಸ್ತು ಸೇವಿಸಿರುವುದು ಪತ್ತೆಯಾಗಿದೆ. ಮಾದಕ ವಸ್ತು ಸೇವಿಸುವವರಲ್ಲಿ ಶಾಲೆಗಳ 15% ಮಕ್ಕಳು ಇದ್ದಾರೆ ಎಂಬುದು ಆಘಾತಕಾರಿ. ಚಾಕೋಲೇಟ್‌ ಮೂಲಕ ಮಾದಕ ವಸ್ತು ನೀಡಿ ಬಳಿಕ ಅವರನ್ನು ವ್ಯಸನಿಗಳಾಗಿ ಮಾಡುತ್ತಾರೆ. ರಾಜ್ಯಕ್ಕೆ 150 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ಬರುತ್ತಿವೆ. ಪೊಲೀಸ್‌ ಇಲಾಖೆಯಲ್ಲಿ ಡ್ರಗ್ಸ್‌ ಜಾಲದೊಂದಿಗೆ ಇರುವವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಿದೆ ಎಂದು ಆರ್​ ಅಶೋಕ್​ ಒತ್ತಾಯಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here