ಕೇರಳ ರಾಜ್ಯದಲ್ಲಿ ಮಲೆಯಾಳಿ ಭಾಷೆಯನ್ನು ಉಳಿಸುವ ಸ್ವಾತಂತ್ರ್ಯ ಅಲ್ಲಿನ ರಾಜ್ಯ ಸರ್ಕಾರಕ್ಕೆ ಇದೆ: ಸಿಎಂ

0
48

Updated By: Priyalachhi 

ಬೆಂಗಳೂರು: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025ಯು ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಹೇಳಲು ವಿಷಾಧಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿ ಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

ಕಾಸರಗೋಡು ಇಂದು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ ಅದು ಭಾವನಾತ್ಮಕವಾಗಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಮಿಳಿತವಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆ ಕನ್ನಡಿಗರೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ಇದೆ ಎಂದು ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಆಗ್ರಹಿಸುತ್ತೇನೆ. ಭಾಷಾ ಅಲ್ಪಸಂಖ್ಯಾತರಿಗೆ ಮಾತೃಭಾಷೆ ಎನ್ನುವುದು ಕೇವಲ ಭಾಷೆ ಅಲ್ಲ, ಅದು ಅವರಿಗೆ ಘನತೆಯ ಬದುಕು ನೀಡುವ ಅಸ್ಮಿತೆಯಾಗಿರುತ್ತದೆ. ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ಸುಲಭದಲ್ಲಿ ವಿಷಯಗಳನ್ನು ಗ್ರಹಿಸುತ್ತಾರೆ ಎನ್ನುವದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅವರ ಮೇಲೆ ಅನ್ಯಭಾಷೆಯನ್ನು ಹೇರುವುದರಿಂದ ಅವರ ಕಲಿಕಾ ಸಾಮರ್ಥ್ಯವನ್ನು ಕುಂದಿಸುವುದು ಮಾತ್ರವಲ್ಲ, ಒಂದು ಸ್ವತಂತ್ರಭಾಷೆಯ ಅವಸಾನಕ್ಕೆ ದಾರಿ ಮಾಡಿಕೊಟ್ಟ ಹಾಗಾಗುತ್ತದೆ ಎಂದು ಕಿಡಿ ಕಾರಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here