ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಹೊರತಾಗಿಯೂ ದೇಶಾದ್ಯಂತ ಇಂಧನ ಸರಬರಾಜು ಸ್ಥಿರವಾಗಿದೆ ಎಂದಿರುವ ಕೇಂದ್ರ ಸರ್ಕಾರ, ಅನಗತ್ಯವಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಖರೀದಿಸದಂತೆ ನಾಗರಿಕರಿಗೆ ಮನವಿ ಮಾಡಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಿರಂತರ ಇಂಧನ ಪೂರೈಕೆ ಮತ್ತು ಪ್ರಮುಖ ವಲಯಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ನಾಗರಿಕರು, ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮತ್ತು ಎಲ್‌ಪಿಜಿಯ ಅನಗತ್ಯ ಬುಕಿಂಗ್ ತಪ್ಪಿಸಲು ಸೂಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನಾಗರಿಕರು ವದಂತಿಗಳ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಬೇಕು. ನಾಗರಿಕರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಬುಕ್ ಮಾಡಲು ಡಿಜಿಟಲ್ ವಿಧಾನಗಳನ್ನು ಬಳಸಬೇಕು ಮತ್ತು ಅಗತ್ಯವಿಲ್ಲದಿದ್ದರೆ ಎಲ್‌ಪಿಜಿ ವಿತರಕರನ್ನು ಭೇಟಿ ಮಾಡುವುದನ್ನು ತಪ್ಪಿಸಬೇಕು. ಎಲ್‌ಪಿಜಿ ಏಜೆನ್ಸಿಗಳ ಮೇಲಿನ ಹೊರೆ ಕಡಿಮೆ ಮಾಡಲು, ಗ್ರಾಹಕರು ಬುಕಿಂಗ್‌ಗಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವಂತೆ ಎಂದು ಸಚಿವಾಲಯ ಕೋರಿದೆ.
ಎಲ್‌ಪಿಜಿ ವಿತರಣೆಯಲ್ಲಿ ಕೊರತೆ ಬಗ್ಗೆ ಯಾವುದೇ ವರದಿಯಾಗಿಲ್ಲ. ನಿನ್ನೆ 51 ಲಕ್ಷಕ್ಕೂ ಹೆಚ್ಚು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ. ವಿತರಣಾ ದೃಢೀಕರಣ ಕೋಡ್ (ಡಿಎಸಿ) ಆಧಾರಿತ ವಿತರಣೆಗಳನ್ನು ಫೆಬ್ರವರಿ 2026ರಲ್ಲಿ ಶೇ.53ರಿಂದ ನಿನ್ನೆ ಶೇ.90ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಡುಗೆ ಇಂಧನ ಪೂರೈಕೆ ಸುಧಾರಿಸಲು, ಸರ್ಕಾರವು ಸಣ್ಣ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆಯನ್ನು ವಿಸ್ತರಿಸಿದೆ ಎಂದು ಎಂದು ಸಚಿವಾಲಯ ತಿಳಿಸಿದೆ.
ನಿನ್ನೆ 90 ಸಾವಿರ 5 ಕೆ.ಜಿ FTL ಸಿಲಿಂಡರ್‌ಗಳು ಮಾರಾಟವಾಗಿವೆ. ಈ ಸಿಲಿಂಡರ್‌ಗಳನ್ನು ಯಾವುದೇ ಮಾನ್ಯ ಗುರುತಿನ ಚೀಟಿಯನ್ನು ತೋರಿಸುವ ಮೂಲಕ ಖರೀದಿಸಬಹುದು ಮತ್ತು ವಿಳಾಸ ಪುರಾವೆ ಅಗತ್ಯವಿಲ್ಲ. ಇದೇ ವೇಳೆ LPG ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರವು ಪೈಪ್ಡ್ ನೈಸರ್ಗಿಕ ಅನಿಲ (PNG) ಸಂಪರ್ಕಗಳ ವಿಸ್ತರಣೆಯನ್ನು ವೇಗಗೊಳಿಸುತ್ತಿದೆ ಎಂದಿದೆ.



