ದಕ್ಷಿಣದ ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿರುವ ಮೋದಿ ಸರ್ಕಾರ

0
9

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಪ್ರಸ್ತಾವಿತ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ (Delimitation) ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕೊನೆಗೂ ಮೌನ ಮುರಿದಿರುವುದನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೇ ವೇಳೆ ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

ದಕ್ಷಿಣದ ರಾಜ್ಯಗಳಿಗೆ ‘ಭರವಸೆ’ ನೀಡುವ ಪ್ರಧಾನಿಯವರ ಈ ಹಠಾತ್ ಕಾಳಜಿಯು ರಾಜಕೀಯ ಮುತ್ಸದ್ದಿತನಕ್ಕಿಂತ ಹೆಚ್ಚಾಗಿ, ಮುಂಬರುವ ಕೇರಳ ಮತ್ತು ತಮಿಳುನಾಡು ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಣೆದ ಚುನಾವಣಾ ತಂತ್ರದಂತೆ ಕಾಣುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕೃತ ‘ಎಕ್ಸ್’ (X) ಖಾತೆಯಲ್ಲಿ ಟೀಕಿಸಿದ್ದಾರೆ.

ಲಾಭ ಯಾರಿಗೆ? ದಕ್ಷಿಣಕ್ಕೆ ಹೇಗೆ ನಷ್ಟ?
ಸಮಸ್ಯೆ ಇರುವುದು ದಕ್ಷಿಣದ ರಾಜ್ಯಗಳ ಲೋಕಸಭಾ ಸೀಟುಗಳು ಹೆಚ್ಚಾಗುತ್ತವೆಯೇ ಎಂಬುದರಲ್ಲಲ್ಲ. ಬದಲಾಗಿ, ಸೀಟುಗಳು ಹೇಗೆ ಹೆಚ್ಚಾಗುತ್ತವೆ ಮತ್ತು ಇದರಿಂದ ಅಸಮಾನವಾಗಿ ಯಾರಿಗೆ ಲಾಭವಾಗುತ್ತದೆ ಎಂಬುದರಲ್ಲಿದೆ. ಪ್ರಸ್ತಾವಿತ ವಿಸ್ತರಣೆಯಡಿ, ಪ್ರತಿಯೊಂದು ರಾಜ್ಯದಲ್ಲೂ ಸೀಟುಗಳು ಹೆಚ್ಚಾದರೂ, ಅದರ ದರ ಮತ್ತು ಪ್ರಮಾಣ ಸ್ಪಷ್ಟವಾಗಿ ಬಿಜೆಪಿ ಪ್ರಾಬಲ್ಯವಿರುವ ಉತ್ತರದ ರಾಜ್ಯಗಳಿಗೆ ಅತಿ ಹೆಚ್ಚು ಲಾಭ ತಂದುಕೊಡಲಿದೆ ಎಂದು ಸಿಎಂ ಹೇಳದಿ್ದಾರೆ.
ಉತ್ತರ ಪ್ರದೇಶದ ಸೀಟುಗಳು 80 ರಿಂದ 120ಕ್ಕೆ (+40), ಮಹಾರಾಷ್ಟ್ರ 48 ರಿಂದ 72ಕ್ಕೆ (+24), ಬಿಹಾರ 40 ರಿಂದ 60ಕ್ಕೆ (+20), ಮಧ್ಯಪ್ರದೇಶ 29 ರಿಂದ 43-44ಕ್ಕೆ (+14-15), ರಾಜಸ್ಥಾನ 25 ರಿಂದ 37-38ಕ್ಕೆ (+12-13) ಮತ್ತು ಗುಜರಾತ್ 26 ರಿಂದ 39ಕ್ಕೆ (+13) ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಸಿಎಂ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ದಕ್ಷಿಣದ ರಾಜ್ಯಗಳಿಗೆ ಅಲ್ಪ ಪ್ರಮಾಣದ ಏರಿಕೆ ಮಾತ್ರ ಸಿಗಲಿದೆ. ಕರ್ನಾಟಕದ ಸೀಟುಗಳು 28 ರಿಂದ 42ಕ್ಕೆ (+14), ತಮಿಳುನಾಡು 39 ರಿಂದ 58-59ಕ್ಕೆ (+20), ಆಂಧ್ರಪ್ರದೇಶ 25 ರಿಂದ 37-38ಕ್ಕೆ (+12-13), ತೆಲಂಗಾಣ 17 ರಿಂದ 25-26ಕ್ಕೆ (+8-9) ಮತ್ತು ಕೇರಳ 20 ರಿಂದ 30ಕ್ಕೆ (+10) ಏರಿಕೆಯಾಗಲಿವೆ. ಐದು ದಕ್ಷಿಣದ ರಾಜ್ಯಗಳು ಒಟ್ಟಾಗಿ ಕೇವಲ 63-66 ಹೆಚ್ಚುವರಿ ಸೀಟುಗಳನ್ನು ಪಡೆದರೆ, ಕೇವಲ ಏಳು ಉತ್ತರದ/ಹಿಂದಿ-ಭಾಷಿಕ ರಾಜ್ಯಗಳು 128-131 ಸೀಟುಗಳನ್ನು ಪಡೆಯುತ್ತವೆ. ಇದು ದಕ್ಷಿಣಕ್ಕಿಂತ ದುಪ್ಪಟ್ಟು ಎಂದು ಸಿಎಂ ತಮ್ಮ ಪೋಸ್ಟ್​ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಜನಸಂಖ್ಯೆ ನಿಯಂತ್ರಿಸಿದವರಿಗೆ ಶಿಕ್ಷೆ
ಲೋಕಸಭೆಯನ್ನು 816 ಸೀಟುಗಳಿಗೆ ವಿಸ್ತರಿಸಿದರೂ, ದಕ್ಷಿಣದ ರಾಜ್ಯಗಳ ಒಟ್ಟು ಪಾಲು ಶೇ. 24ರಷ್ಟೇ ಉಳಿಯಲಿದ್ದು, ಯಾವುದೇ ಬದಲಾವಣೆಯಾಗುವುದಿಲ್ಲ. ಜನಸಂಖ್ಯೆ ನಿಯಂತ್ರಣ ಮತ್ತು ಉತ್ತಮ ಆಡಳಿತ ನೀಡಿದ ರಾಜ್ಯಗಳಿಗೆ ಇದರ ಮೂಲಕ ಶಿಕ್ಷೆ ನೀಡಿದಂತಾಗುತ್ತದೆ. ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡುತ್ತಿರುವ ಕರ್ನಾಟಕವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಅಪಾಯವಿದೆ. ಪ್ರಸ್ತುತ ಉತ್ತರ ಪ್ರದೇಶ ಮತ್ತು ಕರ್ನಾಟಕದ ನಡುವಿನ ಸೀಟುಗಳ ಅಂತರ 52 ಇದ್ದರೆ, ಮುಂದೆ ಇದು 78ಕ್ಕೆ ಏರಲಿದೆ. ಮಹಾರಾಷ್ಟ್ರದೊಂದಿಗಿನ ಅಂತರ 20 ರಿಂದ 30ಕ್ಕೆ ವಿಸ್ತರಣೆಯಾಗಲಿದೆ. ಇದು ಕೇವಲ ವಿಸ್ತರಣೆಯಲ್ಲ, ಅಧಿಕಾರದ ಕೇಂದ್ರೀಕರಣವಾಗಿದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here