Updated By: Priyalachhi
ನವದೆಹಲಿ: ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಈ ಸಂಬಂಧ ಇಂದು ಕೇಂದ್ರ ಸರ್ಕಾರವು ಎಲ್ಲಾ ರಾಜಕೀಯ ಪಕ್ಷಗಳು – ಲೋಕಸಭೆ ಮತ್ತು ರಾಜ್ಯಸಭೆ – ಎರಡೂ ಸದನಗಳನ್ನು ಸುಗಮವಾಗಿ ನಡೆಸಲು ಸಹಕರಿಸುವಂತೆ ಮನವಿ ಮಾಡಿದೆ.
ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸಲಾಗುವುದು. ಅದರ ನಂತರ ಸಂಸತ್ತಿನ ಎರಡೂ ಸದನಗಳಲ್ಲಿ ಬಜೆಟ್ ಕುರಿತು ಚರ್ಚೆ ನಡೆಯಲಿದೆ. ಅಧಿವೇಶನವನ್ನು ಸುಗಮವಾಗಿ ನಡೆಸಲು ಎಲ್ಲಾ ಪಕ್ಷಗಳು ಸಹಕರಿಸಬೇಕೆಂದು ನಾವು ವಿನಂತಿಸಿದ್ದೇವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬಜೆಟ್ ಅಧಿವೇಶನಕ್ಕೂ ಮುನ್ನ ನಡೆದ ಸರ್ವಪಕ್ಷ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸರ್ವಪಕ್ಷಗಳ ಸಭೆಯ ನೇತೃತ್ವ ವಹಿಸಿದ್ದರು ಎಂದು ರಿಜಿಜು ಹೇಳಿದರು. ರಾಜ್ಯಸಭಾ ಆಡಳಿತ ಪಕ್ಷದ ನಾಯಕ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ಎಲ್. ಮುರುಗನ್ ಕೂಡ ಸಭೆಯಲ್ಲಿ ಹಾಜರಿದ್ದರು. ವಿವಿಧ ಪಕ್ಷಗಳ ನಾಯಕರು ನೀಡಿದ ಸಲಹೆಗಳನ್ನು ನಾವು ಗಮನಿಸಿದ್ದೇವೆ. ಇದು ಬಜೆಟ್ ಅಧಿವೇಶನ ಮತ್ತು ಈ ವರ್ಷದ ಮೊದಲ ಸಂಸತ್ ಅಧಿವೇಶನವಾಗಿರುವುದರಿಂದ ಸದನವನ್ನು ನಡೆಸಲು ಸಹಕಾರ ನೀಡುವಂತೆ ನಾವು ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದೇವೆ ಎಂದು ರಿಜಿಜು ಹೇಳಿದರು.
ಜನವರಿ 29 ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು ಮತ್ತು ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮಾಡಲಿದ್ದಾರೆ ಎಂದು ರಿಜಿಜು ಸಭೆಯ ಕುರಿತು ಮಾಹಿತಿ ನೀಡಿದರು.
ಸರ್ಕಾರದ ನಡೆ ಟೀಕಿಸಿದ ಕಾಂಗ್ರೆಸ್; ಅಧಿವೇಶನಕ್ಕೂ ಮುನ್ನ ಕೇಂದ್ರವು ತನ್ನ ಪ್ರಸ್ತಾವಿತ ಸಂಸದೀಯ ಕಾರ್ಯಸೂಚಿಯನ್ನು ಹಂಚಿಕೊಳ್ಳದಿದ್ದಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದೆ. ಪ್ರಸ್ತಾಪಿಸಬೇಕಾದ ಮಸೂದೆಗಳ ಪಟ್ಟಿಯನ್ನು ಹಂಚಿಕೊಳ್ಳದಿದ್ದಕ್ಕಾಗಿ ವಿರೋಧ ಪಕ್ಷಗಳು ಅತೃಪ್ತಿ ಹೊಂದಿವೆ ಎಂದು ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ಕೆ ಸುರೇಶ್ ಹೇಳಿದರು.
ಈ ನಡುವೆ ಸಂಸದೀಯ ಕಾರ್ಯಸೂಚಿಯನ್ನು ನಂತರ ವಿತರಿಸಲಾಗುವುದು ಎಂದು ಸಚಿವರು ಸ್ಪಷ್ಟನೆ ಕೊಟ್ಟರು. ಆದರೆ, ಕಾಂಗ್ರೆಸ್ ಈ ವಿವರಣೆಯನ್ನು ಅತೃಪ್ತಿಕರ ಎಂದು ಹೇಳಿದೆ. ಸರ್ಕಾರವು ಪಾರದರ್ಶಕತೆಯ ಕೊರತೆಯನ್ನು ಹೊಂದಿದೆ ಎಂದು ಕಾಂಗ್ರೆಸ್ ನಾಯಕ ಸುರೇಶ್ ಆರೋಪಿಸಿದ್ದಾರೆ.



