ಪವರ್ ಫೈಟ್ ಚರ್ಚೆಗೆ ಮತ್ತಷ್ಟು ತುಪ್ಪ ಸುರಿಸಿದ 10 ದಿನಗಳ ಕಲಾಪ!

0
20

Updated By: Priyalachhi

ಬೆಳಗಾವಿ: ಡಿ.9ರಿಂದ ಸುವರ್ಣಸೌಧದಲ್ಲಿ ನಡೆದ 10 ದಿನಗಳ ಕಾಲ ನಡೆದ ಚಳಿಗಾಲದ ವಿಧಾನಸಭೆ ಅಧಿವೇಶನ ಶುಕ್ರವಾರ(ಡಿ.19) ಮುಕ್ತಾಯವಾಯಿತು. ದ್ವೇಷ ಭಾಷಣ ನಿಯಂತ್ರಣ ಮಸೂದೆ ಸೇರಿ 23 ವಿಧೇಯಕಗಳಿಗೆ ಅಂಗೀಕಾರ, ಉತ್ತರ ಕರ್ನಾಟಕದ ಸಮಸ್ಯೆಗಳು ಮತ್ತು ಅವುಗಳ ಮೇಲಿನ ಚರ್ಚೆಗಳು ನಡೆದರೆ, ಗೃಹಲಕ್ಷ್ಮಿ ಹಣ ಪಾವತಿ ಗದ್ದಲ, ಪವರ್ ಫೈಟ್ ಚರ್ಚೆಗೆ ಇನ್ನಷ್ಟು ಕಿಚ್ಚು ಹಚ್ಚಿಸುವ ವೇದಿಕೆಯಾಗುವುದರೊಂದಿಗೆ ಈ ಬಾರಿಯ ಚಳಿಗಾಲದ ಅಧಿವೇಶನ ಮುಕ್ತಾಯವಾಗಿದೆ.

ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ಚರ್ಚೆಗೆ ಅಧಿವೇಶನದ ಎರಡನೇ ದಿನದಿಂದಲೇ ಅವಕಾಶ ನೀಡಲಾಯಿತು. ಆ ಮೂಲಕ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಮೇಲಿನ ಚರ್ಚೆಗೆ ಹೆಚ್ಚಿನ ಒತ್ತು ನೀಡಲಾಯಿತು. ಆದರೆ, ಅದು ಪ್ರತಿ ಬಾರಿಯಂತೆ ಬರೀ ಚರ್ಚೆಗಷ್ಟೇ ಸೀಮಿತವಾಯಿತೇ ಹೊರತು, ಉತ್ತರ ಕರ್ನಾಟಕಕ್ಕೆ ಸಮಸ್ಯೆಗಳಿಗೆ ಪರಿಹಾರ ನೀಡುವ ದೊಡ್ಡ ಘೋಷಣೆಗಳೇನು ಹೊರಬಿದ್ದಿಲ್ಲ.

ಚಳಿಗಾಲದ ಅಧಿವೇಶನದಲ್ಲಿ ಸುಮಾರು 57 ಗಂಟೆ 35 ನಿಮಿಷಗಳ ಕಾಲ ಕಲಾಪ ನಡೆಯಿತು.‌ ಈ ಪೈಕಿ ಉತ್ತರ ಕರ್ನಾಟಕದ ಚರ್ಚೆಯಲ್ಲಿ 39 ಸದಸ್ಯರುಗಳು ಭಾಗವಹಿಸಿದ್ದರು. ಒಟ್ಟು 17.02 ಗಂಟೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅಧಿವೇಶನದ ಮೊದಲ‌ ದಿನ ಹಾಲಿ ಶಾಸಕ ಹೆಚ್.ವೈ. ಮೇಟಿ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಕಲಾಪವನ್ನು ಒಂದು ದಿನಕ್ಕೆ ಮುಂದೂಡಲಾಯಿತು.‌ ಬಳಿಕ ಕಲಾಪದ ಆರನೇ ದಿನ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಂತಾಪ ಸೂಚಿಸಿ ಕಲಾಪವನ್ನು ಒಂದು ದಿನಕ್ಕೆ ಮುಂದೂಡಿಕೆ ಮಾಡಲಾಯಿತು.

23 ಮಸೂದೆಗಳು ಅಂಗೀಕಾರ: ಅಧಿವೇಶನದಲ್ಲಿ ದ್ವೇಷ ಭಾಷಣ ತಡೆ ಮಸೂದೆ, ಸಾಮಾಜಿಕ ಬಹಿಷ್ಕಾರ ನಿಷೇಧ ಮಸೂದೆ, ಕರ್ನಾಟಕ ಅನುಸೂಚಿತ ಜಾತಿಗಳ ಉಪ ವರ್ಗೀಕರಣ ವಿಧೇಯಕ ಸೇರಿ 23 ಮಸೂದೆಗಳು ಮಂಡನೆಯಾಗಿ ಅಂಗೀಕಾರವಾದವು. ವಿಪಕ್ಷಗಳ ವಿರೋಧ, ಪ್ರತಿಭಟನೆ, ಗದ್ದಲದ ಮಧ್ಯೆ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಅಂಗೀಕಾರವಾಯಿತು. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ, ಔಷಧ ಮತ್ತು ಪ್ರಸಾಧನ ಸಾಮಗ್ರಿ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ಮಸೂದೆ ಹಾಗೂ ಧನವಿನಿಯೋಗ ಮಸೂದೆಗಳು ಅಂಗೀಕಾರಗೊಂಡವು.

ಜೊತೆಗೆ, 2025ನೇ ಸಾಲಿನ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ತಿದ್ದುಪಡಿ ವಿಧೇಯಕ, 2025ನೇ ಸಾಲಿನ ಬಾಂಬೆ ಸಾರ್ವಜನಿಕ ನ್ಯಾಸ(ಕರ್ನಾಟಕ ತಿದ್ದುಪಡಿ) ವಿಧೇಯಕ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಎರಡನೇ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ (ತಿದ್ದುಪಡಿ) ವಿಧೇಯಕ, ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ, ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ಭೂಕಂದಾಯ ಎರಡನೇ ತಿದ್ದುಪಡಿ ವಿಧೇಯಕಗಳು ಅಂಗೀಕೃತವಾಗಿವೆ.

sambrama prabha editor suresh kt

LEAVE A REPLY

Please enter your comment!
Please enter your name here