Updated By: Priyalachhi
Aus vs ENG 4th Test: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿಯು ಭರದಿಂದ ಸಾಗುತ್ತಿದೆ. ಈ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇದುವರೆಗೆ ಮೂರು ಪಂದ್ಯಗಳು ಪೂರ್ಣಗೊಂಡಿದ್ದು, ಆಸ್ಟ್ರೇಲಿಯಾ ಮೂರನ್ನೂ ಗೆದ್ದು ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡು ಟ್ರೋಫಿಯನ್ನು ಸಹ ಉಳಿಸಿಕೊಂಡಿದೆ.
ಇದೀಗ ಉಭಯ ತಂಡಗಳ ನಡುವಿನ ನಾಲ್ಕನೇ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಾಳೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಸರಣಿಯನ್ನು ಗೆದ್ದಿರುವ ಆಸ್ಟ್ರೇಲಿಯಾ, ಉಳಿದ ಪಂದ್ಯಗಳನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ಅನ್ನು ವೈಟ್‌ವಾಶ್ ಮಾಡುವ ಗುರಿಯನ್ನು ಹೊಂದಿದೆ.
ಇಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ 12 ಆಟಗಾರರ ತಂಡ ಘೋಷಿಸಿದೆ. ಪ್ಯಾಟ್ ಕಮ್ಮಿನ್ಸ್ ಸರಣಿಯಿಂದ ಹೊರಗುಳಿದ ಕಾರಣ ಸ್ಟೀವ್ ಸ್ಮಿತ್ ಮತ್ತೊಮ್ಮೆ ತಂಡವನ್ನು ಮುನ್ನಡೆಸಲಿದ್ದಾರೆ. ಗುರುವಾರ ಆಸ್ಟ್ರೇಲಿಯಾದ ಅಂತಿಮ ತರಬೇತಿ ಅವಧಿಯ ನಂತರ ನಾಲ್ಕನೇ ಟೆಸ್ಟ್‌ಗೆ ತಂಡ ಪ್ರಕಟಿಸಿದೆ.
ನಾವು ನಾಳೆ ಪಿಚ್ ಪರಿಸ್ಥಿತಿಯನ್ನು ಗಮನಿಸಿದ ಬಳಿಕವೆ ಪ್ಲೇಯಿಂಗ್ ಇಲೆವೆನ್ ಘೋಷಣೆ ಮಾಡಲಿದ್ದೇವೆ. ಅಲ್ಲದೆ ನಾವು ನಾಲ್ಕು ವೇಗದ ಬೌಲರ್‌ಗಳೊಂದಿಗೆ ಆಡಲಿದ್ದೇವೆ ಮತ್ತು ತಂಡದಲ್ಲಿ ಯಾವುದೇ ಸ್ಪಿನ್ನರ್‌ಗಳಿರಲ್ಲ. ಇಲ್ಲಿಯ ಪಿಚ್ ವೇಗದ ಬೌಲರ್‌ಗಳಿಗೆ ಹೆಚ್ಚಿನ ಸಹಕಾರಿ ಆಗಿರಲಿದೆ. ವಿಶೇಷವಾಗಿ ಮೊದಲ ದಿನದಂದು ಬೌಲರ್ ಪ್ರಾಬಲ್ಯ ಸಾಧಿಸಲಿದ್ದಾರೆ” ಎಂದು ಸ್ಮಿತ್ ತಿಳಿಸಿದ್ದಾರೆ.
ಏತನ್ಮಧ್ಯೆ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿನ್ನೆ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದೆ. ಬೆನ್ ಸ್ಟೋಕ್ಸ್ ನೇತೃತ್ವದ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ವೇಗದ ಬೌಲರ್ ಜೋಫ್ರಾ ಆರ್ಚರ್ ಗಾಯದ ಕಾರಣದಿಂದಾಗಿ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಘೋಷಿಸಲಾಗಿದೆ.



