Updated By: Priyalachhi
ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಹೆಚ್ಚಿನ ಹಣವನ್ನು ಮಂಜೂರು ಮಾಡಿ ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಗುರುವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಅಭಿನಂದಿಸಿದ್ದಾರೆ.
ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಅನ್ನು ಬೀದರ್ ವರೆಗೆ ವಿಸ್ತರಿಸಬೇಕು ಎಂದು ದೇವೇಗೌಡರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಮಾಜಿ ಪ್ರಧಾನಿ, 2026ರ ಬಜೆಟ್‌ನಲ್ಲಿ ಸುಮಾರು 4,000 ಕಿ.ಮೀ. ವ್ಯಾಪ್ತಿಯ ಏಳು ಹೊಸ ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆಯನ್ನು ಶ್ಲಾಘಿಸಿದ್ದಾರೆ.
ಈ ರೈಲು ಕಾರಿಡಾರ್‌ಗಳು ಅಭಿವೃದ್ಧಿಯ ಕನೆಕ್ಟರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಸುಸ್ಥಿರ ಸಾರಿಗೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತವೆ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.
ಅವುಗಳಲ್ಲಿ, ಚೆನ್ನೈ-ಬೆಂಗಳೂರು-ಹೈದರಾಬಾದ್ ಕಾರಿಡಾರ್(ಹೈದರಾಬಾದ್-ಚೆನ್ನೈ ಮತ್ತು ಚೆನ್ನೈ-ಬೆಂಗಳೂರು) ದಕ್ಷಿಣ ಪ್ರದೇಶದಲ್ಲಿ ಅತಿ ವೇಗದ ತ್ರಿಕೋನವನ್ನು ಸೃಷ್ಟಿಸುತ್ತದೆ. ಈ ಕಾರಿಡಾರ್ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ಜನರ ಆಕಾಂಕ್ಷೆಗಳು ಮತ್ತು ಚಲನಶೀಲತೆಯ ಅಗತ್ಯಗಳನ್ನು ನೇರವಾಗಿ ಪೂರೈಸುತ್ತದೆ ಮತ್ತು ಕೇರಳ ಹಾಗೂ ಪುದುಚೇರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.



