Updated By: Priyalachhi
ನವದೆಹಲಿ/ ಹುಬ್ಬಳ್ಳಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ರ ಆರ್ಥಿಕ ಮುನ್ನೋಟವು ಪ್ರಧಾನಿ ನರೇಂದ್ರ ಮೋದಿ ಅವರ ʼವಿಕಸಿತ ಭಾರತʼ ಕನಸಿಗೆ ಪೂರಕವಾದ ಮತ್ತು ಭವ್ಯ ಭಾರತದ ಭವಿಷ್ಯ ನಿರ್ಮಾಣಕ್ಕೆ ದಾರಿದೀಪವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ.
ಇದು ಭಾರತದ ಬೆಳವಣಿಗೆ ಕೇಂದ್ರಿತ ಬಜೆಟ್ ಆಗಿದ್ದು, ಏಳು ಪ್ರಮುಖ ಕ್ಷೇತ್ರಗಳಲ್ಲಿ ಉತ್ಪಾದನಾ ಸಾಮರ್ಥ್ಯ ಬಲಪಡಿಸುವಿಕೆ ಮೇಲೆ ಕೇಂದ್ರೀಕೃತವಾಗಿದೆ. ವಿಶೇಷವಾಗಿ ಬಯೋಫಾರ್ಮಾ ಕ್ಷೇತ್ರಕ್ಕೆ ₹10,000 ಕೋಟಿ ಮೀಸಲಿಟ್ಟು ನವೀನತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ಪಾದನೆಗೆ ಬಲವಾದ ಉತ್ತೇಜನ ನೀಡಲಾಗಿದೆ. ಇಂಡಿಯನ್ ಸೆಮಿಕಂಡಕ್ಟರ್ ಮಿಷನ್ 2.0 ಆರಂಭವು ಭಾರತವನ್ನು ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವನ್ನಾಗಿ ರೂಪಿಸುವಲ್ಲಿ ದಿಟ್ಟ ಹೆಜ್ಜೆಯಾಗಿದೆ ಎಂದಿದ್ದಾರೆ.
ಕೈಗಾರಿಕಾ ಅಡಿಪಾಯಕ್ಕೆ ಸುಭದ್ರತೆ: ದೇಶೀಯ ಉತ್ಪಾದನೆಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಎಲೆಕ್ಟ್ರಾನಿಕ್ಸ್ ಘಟಕಗಳ ಉತ್ಪಾದನಾ ಯೋಜನೆಗೆ ನೀಡುವ ಹೂಡಿಕೆಯನ್ನು ಸುಮಾರು ₹40,000 ಕೋಟಿಗೆ ಹೆಚ್ಚಿಸಲಾಗಿದೆ. ಇದರ ಜೊತೆಗೆ ಅಪರೂಪದ ಖನಿಜಗಳ ಬಳಕೆ (Rare Earth Mining), ಕೆಮಿಕಲ್ ಪಾರ್ಕ್ (chemical park) ಸ್ಥಾಪನೆ ಹಾಗೂ ಜಾಗತಿಕ ಮಟ್ಟದ ಕಂಟೈನರ್ ಉತ್ಪಾದನೆಗೆ ₹10,000 ಕೋಟಿ ನೆರವು ಘೋಷಿಸಿದ್ದು, ಭಾರತದ ಕೈಗಾರಿಕಾ ಅಡಿಪಾಯವನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.
ಗ್ರಾಮಗಳ ಬೆಳವಣಿಗೆಗೆ ಪ್ರತೀಕ: ಕಾರ್ಮಿಕರ ಆಧಾರಿತ ವಸ್ತ್ರೋದ್ಯಮಕ್ಕೆ ವಿಶೇಷ ಒತ್ತು ನೀಡಿದ್ದು, ಖಾದಿ ಗ್ರಾಮೋದ್ಯೋಗ ಮತ್ತು ಕೈಗಾರಿಕೆಗಳಿಗೆ ಹೊಸ ಚೈತನ್ಯ ತುಂಬಲು ʼಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ʼ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSME) ರಾಷ್ಟ್ರೀಯ ಚಾಂಪಿಯನ್‌ಗಳಾಗಿ ರೂಪಿಸುವ ಉದ್ದೇಶದಿಂದ ₹10,000 ಕೋಟಿ ಇಕ್ವಿಟಿ ಬೆಂಬಲ ಒದಗಿಸಲಾಗಿದೆ. ಸಾರ್ವಜನಿಕ ಮೂಲಸೌಕರ್ಯಕ್ಕೆ ಇತಿಹಾಸದಲ್ಲೇ ಅತಿ ಹೆಚ್ಚು ₹12.2 ಲಕ್ಷ ಕೋಟಿ ಮೀಸಲಿಡಲಾಗಿದೆ. ಇದು ದೀರ್ಘಕಾಲೀನ ಬೆಳವಣಿಗೆಯತ್ತ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಜೋಶಿ ಪ್ರತಿಪಾದಿಸಿದ್ದಾರೆ.



