Updated By: Priyalachhi
ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಪ್ರಕೃತಿ ಚಿಕಿತ್ಸಾ ವೈದ್ಯೆ ಡಾ.ರಶ್ಮಾ ಎಂ.ಶೆಟ್ಟಿ ಅವರು ಜೈಪುರದ ಜೈಬಾಗ್ ಪ್ಯಾಲೇಸ್‌ನಲ್ಲಿ ನಡೆದ ಮಿಸೆಸ್ ಇಂಡಿಯಾ–ಸೀಸನ್ 15ರ ಅಂತಿಮ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ–2025 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ 40 ಅಂತಿಮ ಸ್ಪರ್ಧಿಗಳ ನಡುವೆ ನಡೆದ ಪ್ರತಿಷ್ಠಿತ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ, ಈ ಗೌರವವನ್ನು ತಮ್ಮದಾಗಿಸಿಕೊಂಡರು.
ಡಿ.18ರಿಂದ ಡಿ.21ರ ವರೆಗೆ ನಡೆದ ನಾಲ್ಕು ದಿನಗಳ ಈ ಸ್ಪರ್ಧೆಯಲ್ಲಿ ಪ್ರತಿಭಾ ಸುತ್ತು, ಪ್ರೇರಣಾದಾಯಕ ಜೀವನ ಕಥೆ, ವೈಯಕ್ತಿಕ ಸಂದರ್ಶನ, ರ‍್ಯಾಂಪ್ ವಾಕ್, ರಾಷ್ಟ್ರೀಯ ವೇಷಭೂಷಣ, ಸಾಂಪ್ರದಾಯಿಕ ಸುತ್ತು ಹಾಗೂ ಈವಿನಿಂಗ್ ಗೌನ್ ಸುತ್ತುಗಳ ಮೂಲಕ ಸ್ಪರ್ಧಿಗಳನ್ನು ಮೌಲ್ಯಮಾಪನ ಮಾಡಲಾಯಿತು. ಈ ಎಲ್ಲ ಸುತ್ತುಗಳಲ್ಲಿ ಸಮರ್ಪಕ ಪ್ರದರ್ಶನ ನೀಡಿದ ಡಾ.ರಶ್ಮಾ ಶೆಟ್ಟಿ, ಅಂತಿಮವಾಗಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು.
ಪುತ್ತೂರಿನಿಂದ ಆರಂಭವಾದ ಪಯಣ: ಡಾ.ರಶ್ಮಾ ಎಂ.ಶೆಟ್ಟಿ ಅವರು ಪುತ್ತೂರಿನಲ್ಲಿ ಜನಿಸಿ ಬೆಳೆದವರು. ಪಾಪೆಮಜಲು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಪುತ್ತೂರು ಕೊಂಬೆಟ್ಟು ಸರ್ಕಾರಿ ಕಾಲೇಜಿನಲ್ಲಿ ಪ್ರಿ ಯುನಿವರ್ಸಿಟಿ ಶಿಕ್ಷಣ ಪಡೆದರು. ಬಳಿಕ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗಿಕ್ ಸೈನ್ಸ್ ಪದವಿ ಪಡೆದ ಅವರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ರ‍್ಯಾಂಕ್ ಪಡೆದು, ತಮ್ಮ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿನಿಯಾಗಿಯೂ ಗುರುತಿಸಿಕೊಂಡರು.
ಶೈಕ್ಷಣಿಕ ಸಾಧನೆಯ ಜತೆಗೆ ಡಾ.ರಶ್ಮಾ ಶೆಟ್ಟಿ ಕ್ರೀಡಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಡಿಸ್ಕಸ್ ಥ್ರೋ, ಜಾವೆಲಿನ್ ಮತ್ತು ಥ್ರೋಬಾಲ್‌ನಲ್ಲಿ ರಾಜ್ಯ ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಸ್ಪರ್ಧಿಸಿ, ಥ್ರೋಬಾಲ್ ತಂಡದ ನಾಯಕತ್ವ ವಹಿಸಿದ್ದರು.
ಮಧ್ಯಮ ವರ್ಗದ, ಸಂಪ್ರದಾಯಬದ್ಧ ಕುಟುಂಬದಲ್ಲಿ ಬೆಳೆದ ಡಾ.ರಶ್ಮಾ ಶೆಟ್ಟಿ, ಶಾಲಾ ದಿನಗಳಿಂದಲೇ ಓದು, ಕ್ರೀಡೆ ಮತ್ತು ಪ್ರತಿಭೆಯಲ್ಲಿ ಆಲ್ರೌಂಡರ್ ಆಗಿದ್ದರು. ವೈದ್ಯಕೀಯ ಶಿಕ್ಷಣದ ಸಂದರ್ಭದಲ್ಲಿ ಕೂಡ ಕ್ರೀಡೆ ಮತ್ತು ಅಕಾಡೆಮಿಕ್ಸ್ ಎರಡನ್ನೂ ಸಮತೋಲನದಲ್ಲಿ ನಿಭಾಯಿಸಿ, ವಿಶ್ವವಿದ್ಯಾಲಯ ಮಟ್ಟದ ಸಾಧನೆ ಮಾಡಿದರು. ನಂತರ ಒಂದು ವರ್ಷ ಕಾಲ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮದುವೆ ನಂತರವೂ ಮುಂದುವರಿದ ಸಾಧನೆಯ ಪಯಣ: ಮದುವೆಯ ನಂತರ ಮುಂಬೈಗೆ ತೆರಳಿದ ಡಾ.ರಶ್ಮಾ ಶೆಟ್ಟಿ, ಅಲ್ಲಿ ವೈದ್ಯಕೀಯ ಸೇವೆಯ ಜತೆಗೆ ಕ್ರೀಡಾ ಚಟುವಟಿಕೆಗಳನ್ನು ಮುಂದುವರಿಸಿದರು. ಕುಟುಂಬದ ಬೆಂಬಲ, ವಿಶೇಷವಾಗಿ ಅತ್ತೆಯವರ ಪ್ರೋತ್ಸಾಹ, ಅವರ ಪಯಣಕ್ಕೆ ಬಲ ನೀಡಿತು. ಈ ಹಂತದಲ್ಲೇ ಅವರು ಪ್ಯಾಜೆಂಟ್ ಕ್ಷೇತ್ರದತ್ತ ಹೆಜ್ಜೆ ಇಟ್ಟರು. ಆಕಾಂಕ್ಷ ಮಿಸೆಸ್ 2023 ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಆಗುವ ಮೂಲಕ ತಮ್ಮ ಪ್ಯಾಜೆಂಟ್ ಪಯಣ ಆರಂಭಿಸಿದರು.
ಪ್ಯಾಜೆಂಟ್ ಕ್ಷೇತ್ರದಲ್ಲಿ ಹಂತ ಹಂತದ ಸಾಧನೆ: ಪಾಥ್ವೇ ಮಾಡೆಲಿಂಗ್ ಸ್ಟುಡಿಯೋ ಆಯೋಜಿಸಿದ್ದ ಆಡಿಷನ್ ಮೂಲಕ, ಮಂಗಳೂರಿನಲ್ಲಿ ನಡೆದ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ಡಾ. ರಶ್ಮಾ ಶೆಟ್ಟಿ, ಮಿಸೆಸ್ ಇಂಡಿಯಾ ಮಂಗಳೂರು 2024 ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಗೆ ಪಾತ್ರರಾದರು.
ಮುಂದುವರಿದು ಮಿಸೆಸ್ ಇಂಡಿಯಾ ಕರ್ನಾಟಕ 2024 ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಆಗಿ ಹೊರಹೊಮ್ಮಿದ ಅವರು, ಟ್ಯಾಲೆಂಟ್ ರೌಂಡ್, ರ‍್ಯಾಂಪ್ ವಾಕ್, ಟಾಸ್ಕ್ (ಶಾರ್ಟ್ ಫಿಲ್ಮ್) ವಿಭಾಗ ಇವುಗಳಲ್ಲಿ ವಿಶೇಷ ಬಹುಮಾನಗಳನ್ನು ಗಳಿಸಿದರು.



