ಮಹಾಂತೇಶ ಬೀಳಗಿ ಸೇರಿ ನಾಲ್ವರ ಅಂತ್ಯಕ್ರಿಯೆ

0
59

Updated By: Priyalachhi

ಬೆಳಗಾವಿ: ವಿಭೂತಿ ಪುರುಷ, ಜನಸ್ನೇಹಿ ಆಡಳಿತಗಾರ, ಬಡವರ ಪಾಲಿಗೆ ದೇವರೇ ಆಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರು ದುರಂತ ಅಂತ್ಯ ಕಂಡಿದ್ದಾರೆ. ಇನ್ನೂ ಬದುಕಿ ಬಾಳಬೇಕಿದ್ದ ಅವರು, ಅರ್ಧದಲ್ಲೇ ಪಯಣ ಮುಗಿಸಿ‌ ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಸಾವಿರಾರು ಜನರು ಒಲ್ಲದ ಮನಸ್ಸಿನಿಂದಲೇ ಅವರಿಗೆ ಅಂತಿಮ ವಿದಾಯ ಹೇಳಿದರು.

ಕಲಬುರಗಿ ಜಿಲ್ಲೆಯ ಜೇವರ್ಗಿ ಬಳಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಾಘತದಲ್ಲಿ ಮೃತಪಟ್ಟ ಮಹಾಂತೇಶ ಬೀಳಗಿ ಸೇರಿ ನಾಲ್ವರ ಮೃತದೇಹಗಳ ಅಂತ್ಯಕ್ರಿಯೆ ಇಂದು ಸಂಜೆ 5:40ರ ವೇಳೆಗೆ ರಾಮದುರ್ಗ ಹೊರ ವಲಯದ ಅವರ ತೋಟದಲ್ಲಿ ಲಿಂಗಾಯತ ಧರ್ಮದ ವಿಧಿವಿಧಾನಗಳ ಪ್ರಕಾರ ನೆರವೇರಿತು.

ಮಹಾಂತೇಶ ಬೀಳಗಿ ಅವರ ಚಿತೆಗೆ ಅಣ್ಣ ಸಿದ್ದರಾಮಪ್ಪ ಅವರು ಅಗ್ನಿಸ್ಪರ್ಶ ಮಾಡಿದರು. ಕುಟುಂಬಸ್ಥರ ಆಕ್ರಂದನದ ನಡುವೆ ನಾಲ್ವರ ಅಂತ್ಯಸಂಸ್ಕಾರ ಮಾಡಲಾಯಿತು. ಮಹಾಂತೇಶ ಅವರ ಪಕ್ಕದಲ್ಲಿ ಶಂಕರ ಬೀಳಗಿ, ಈರಣ್ಣಾ ಬೀಳಗಿ, ಈರಣ್ಣಾ ಶಿರಸಂಗಿ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಲಾಯಿತು.‌ ಈ ವೇಳೆ ಪತ್ನಿ ರೇಖಾ, ಪುತ್ರಿ ಚೈತನ್ಯ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

50ಕ್ಕೂ ಅಧಿಕಾರಿಗಳಿಂದ ಅಂತಿಮ ದರ್ಶನ: ಇದಕ್ಕೂ ಮುನ್ನ ಶಾಸಕ ಅಶೋಕ ಪಟ್ಟಣ, ಜಿ.ಎಸ್.ಪಾಟೀಲ್, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ, ವೈ.ಎಸ್.ಪಾಟೀಲ, ಶಿವಾನಂದ ಕಾಪಶಿ, ವಿಜಯಮಹಾಂತೇಶ, ಸುರೇಶ ಇಟ್ನಾಳ್, ವೈಶಾಲಿ, ರವಿ ಚೆನ್ನಣ್ಣವರ, ಯಶೋಧಾ ವಂಟಗೋಡಿ, ಚನ್ನಬಸವಣ್ಣ ಲಂಗೋಟಿ, ಡಾ.ಭೀಮಾಶಂಕರ ಗುಳೇದ, ಹಣಮಂತರಾಯಪ್ಪ, ರಿಷಂತ್, ಯಶವಂತ ಗುರಿಕಾರ, ಗಂಗಾಧರಸ್ವಾಮಿ, ಗೋವಿಂದರೆಡ್ಡಿ, ಪದ್ಮಾ ಬಸವಂತಪ್ಪ, ಶಶಿಧರ ಕುರೇರ ಸೇರಿದಂತೆ 50ಕ್ಕೂ ಅಧಿಕ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಹಾಜರಿದ್ದು ಅಂತಿಮ ದರ್ಶನ ಪಡೆದರು.

ಕಂಬನಿ ಮಿಡಿದ ಅಧಿಕಾರಿಗಳು: ಮಹಾಂತೇಶ ಬೀಳಗಿ ಅವರ ಅಕಾಲಿಕ ಮರಣಕ್ಕೆ ಅವರ ಬ್ಯಾಚ್​ಮೇಟ್​, ಅವರ ಅಧೀನದಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಕಣ್ಣೀರು ಹಾಕಿದರು‌‌. ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಇದೇ ವೇಳೆ ಪುತ್ರಿ ಚೈತನ್ಯಾಗೆ ನೀನು ಐಎಎಸ್ ಅಧಿಕಾರಿ ಆಗಬೇಕು. ಒಳ್ಳೆಯ ಹೆಸರು ಸಂಪಾದಿಸಬೇಕು. ದಕ್ಷ ಆಡಳಿತದ ಮೂಲಕ ಜನ ಮೆಚ್ಚುಗೆ ಗಳಿಸಬೇಕು. ಆ ಮೂಲಕ ತಂದೆಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು ಎಂದು ಹರಸಿದರು.

ಹಲವು ಸ್ವಾಮೀಜಿಗಳು ಭಾಗಿ: ಇಳಕಲ್ ಮಠದ ಗುರುಮಹಾಂತ ಸ್ವಾಮೀಜಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಗಚ್ಚಿನಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಚಂದರಗಿಯ ಗಡದೇಶ್ವರ ಸ್ವಾಮೀಜಿ, ಢವಳೇಶ್ವರ ಸ್ವಾಮೀಜಿ, ಬಡೇಕೊಳ್ಳಮಠದ ನಾಗೇಂದ್ರ ಸ್ವಾಮೀಜಿ, ಮುಳ್ಳೂರಿನ ಚಂದ್ರಶೇಖರ ಸ್ವಾಮೀಜಿ, ಅವರಾದಿಯ ಶಿವಮೂರ್ತಿ ಸ್ವಾಮೀಜಿ, ರಾಮದುರ್ಗದ ಶಾಂತವೀರ ಸ್ವಾಮೀಜಿ, ಮುನವಳ್ಳಿಯ ಮುಕ್ತಾನಂದ ಸ್ವಾಮೀಜಿ ಸೇರಿ ಮತ್ತಿತರರು ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಪಾಲ್ಗೊಂಡಿದ್ದರು

ಬೆಳಗ್ಗೆಯಿಂದ ಏನೇನಾಯಿತು?:

  • ಬೆಳಗ್ಗೆ 7:30ರ ಸುಮಾರಿಗೆ ಕಲಬುರಗಿಯಿಂದ ಮಹಾಂತೇಶ ಬೀಳಗಿ ಸೇರಿ ಮೂವರ ಮೃತದೇಹಗಳನ್ನು ರಾಮದುರ್ಗಕ್ಕೆ ತರಲಾಯಿತು.
  • ನವಿಪೇಟದಲ್ಲಿರುವ ಸ್ವಗೃಹದಲ್ಲಿ ಧಾರ್ಮಿಕ‌ ವಿಧಿವಿಧಾನ ನಡೆಯಿತು.
  • 10 ಗಂಟೆಯ ಸುಮಾರಿಗೆ ರಾಮದುರ್ಗದ ಪಂಚಗಟ್ಟಿಮಠ ಶಾಲಾ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
  • ಸಂಜೆ ಆರು ಗಂಟೆಗಳ‌ವರೆಗೆ ಸಾವಿರಾರು ಜನರು, ಗಣ್ಯರು, ವಿದ್ಯಾರ್ಥಿಗಳು ಆಗಮಿಸಿ ಅಂತಿಮ‌ ದರ್ಶನ ಪಡೆದರು.
  • ಪೊಲೀಸರು‌ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು.
  • ಪಾರ್ಥಿವ ಶರೀರದ ಮೆರವಣಿಗೆ ಅಂತ್ಯಕ್ರಿಯೆ ನಡೆಯಲಿರುವ ಹಲಗತ್ತಿ ತೋಟದವರೆಗೆ ನಡೆಯಿತು.

ಇದಕ್ಕೂ ಮೊದಲು, ಮಹಾಂತೇಶ ಬೀಳಗಿ ಅವರ ಪಾರ್ಥಿವ ಶರೀರದ ಮೇಲೆ ಪುಷ್ಪಗುಚ್ಛ ಇಟ್ಟು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗೌರವ ಸಮರ್ಪಿಸಿದರು. ಇದೇ ವೇಳೆ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು‌. ನಂತರ ಪಂಚಗಟ್ಟಿಮಠ ಶಾಲಾ‌ ಮೈದಾನದಿಂದ ಹಲಗತ್ತಿ ತೋಟದ ಮನೆವರೆಗೆ ಅಂತಿಮ ಯಾತ್ರೆ ನಡೆಯಿತು. ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here