Updated By: Priyalachhi
ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಪ್ರಕ್ರಿಯೆಯಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರೇ ಗೆಲುವು ಸಾಧಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ನಂಜೇಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಬಿಜೆಪಿಯ ಪ್ರತಿಸ್ಪರ್ಧಿ ಅಭ್ಯರ್ಥಿ ಕೆ.ಎಸ್. ಮಂಜುನಾಥ ಗೌಡ ಅವರಿಗಿಂತ 250 ಹೆಚ್ಚಿನ ಮತಗಳನ್ನು ಪಡೆದಿರುವುದಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದ್ದು, ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ನಂಜೇಗೌಡ ಕೇವಲ 248 ಮತಗಳಿಂದ ಗೆಲುವು ಸಾಧಿಸಿದ್ದರು. ಅವರು 50, 955 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಮಂಜುನಾಥ ಗೌಡ 50, 707 ಮತ ಗಳಿಸಿದ್ದರು. ನಂತರ ಮಂಜುನಾಥ ಗೌಡ ನ್ಯಾಯಾಲಯದಲ್ಲಿ ತಕಾರರು ಅರ್ಜಿ ಸಲ್ಲಿಸಿದ್ದರು. ಮತಗಳ ಮರು ಎಣಿಕೆ ಮತ್ತು ಫಲಿತಾಂಶಗಳನ್ನು ಹೊಸದಾಗಿ ಘೋಷಿಸಲು ಹೈಕೋರ್ಟ್ ಆದೇಶಿಸಿತು.



