ರಾಜಕೀಯ ಸ್ವಾರ್ಥಕ್ಕಾಗಿ ಮಾತ್ರ ಸಾಮಾಜಿಕ ನ್ಯಾಯದ ಜಪ: ಹೆಚ್​ ಡಿ ದೇವೇಗೌಡ ವಾಗ್ದಾಳಿ

0
29

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಹಾಲಿ ಮುಖ್ಯಮಂತ್ರಿ ಸಾಮಾಜಿಕ ನ್ಯಾಯದ ಪರ ಇಲ್ಲ ಎಂದು ನೇರ ಆರೋಪ ಮಾಡಿದರು.

ಬೆಂಗಳೂರು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರೇಟರ್ ಬೆಂಗಳೂರು ಜೆಡಿಎಸ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಮಾತ್ರ ಅವರು ಸಾಮಾಜಿಕ ನ್ಯಾಯದ ಜಪ ಮಾಡುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಅಹಿಂದ ನಾಯಕರು ಕುಮಾರಸ್ವಾಮಿ ಅವರ ಸರ್ಕಾರ ತೆಗೆದರು. ಹಾಗೆಯೇ ನಮ್ಮ ಪಕ್ಷವನ್ನು ಮುಗಿಸುವ ವ್ಯವಸ್ಥಿತ ಹುನ್ನಾರವನ್ನೂ ನಡೆಸಿದರು. ಇಂತಹ ಶಕ್ತಿಗಳಿಗೆ ಪಾಠ ಕಲಿಸಲೇಬೇಕೆಂದು ನಿರ್ಧರಿಸಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಕುಮಾರಸ್ವಾಮಿ ಅವರಿಗೆ ಸ್ವತಃ ನಾನೇ ಅನುಮತಿ ಕೊಟ್ಟೆ. ಇವತ್ತು ಕೇಂದ್ರ ಮಂತ್ರಿಯಾಗಿ ಕುಮಾರಸ್ವಾಮಿ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ರಾಜ್ಯ ಸರ್ಕಾರ ಸಹಕಾರ ಕೊಡುತ್ತಿಲ್ಲ. ಕುದುರೆಮುಖ ಕಂಪನಿ ಮತ್ತು ಹೆಚ್ಎಂಟಿ ವಿಚಾರವಾಗಿ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ರಾಜ್ಯದ ಹಿತದ ಬಗ್ಗೆ ಇವರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಕುಮಾರಸ್ವಾಮಿ ಅವರು ಅಂಜದೆ ತಮ್ಮ ಕೆಲಸಗಳನ್ನು ಮುಂದುವರಿಸಿದ್ದಾರೆ ಅವರು ಹೇಳಿದರು.

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಬಲಿಷ್ಠವಾಗಿದೆ. ನಿತೀಶ್ ಕುಮಾರ್ ಅವರಿಗೆ ನರೇಂದ್ರ ಮೋದಿ ಅವರು ಶಕ್ತಿ ತುಂಬಿದ್ದಾರೆ. ನಂಬಿಕೆ, ವಿಶ್ವಾಸದ ಮೇಲೆ ಅವರು ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಜೊತೆ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ವಿಶ್ವಾಸ ದ್ರೋಹದಿಂದಲೇ ಜೆಡಿಎಸ್ ಪಕ್ಷ ಎನ್​ಡಿಎ ಮೈತ್ರಿಕೂಟ ಸೇರುವಂತಾಯಿತು ಎಂದು ಮಾಜಿ ಪ್ರಧಾನಿ ಹೇಳಿದರು.

ದರಿದ್ರ ನಾರಾಯಣ ರ್ಯಾಲಿಗೆ ಸಿದ್ದರಾಮಯ್ಯ ಬರಲಿಲ್ಲ: ನಮ್ಮದು ಕುಟುಂಬ ಪಕ್ಷವಲ್ಲ. ಈ ಪಕ್ಷದಿಂದ ಯಾರು ಯಾರು ಎತ್ತರಕ್ಕೆ ಬೆಳೆದಿದ್ದಾರೆ ಎಂಬುದನ್ನು ನಾನು ಇಲ್ಲಿ ಬಿಡಿಸಿ ಹೇಳುವುದಿಲ್ಲ. ಆದರೆ ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಎಂಬುದಕ್ಕೆ ಶಕ್ತಿ ತುಂಬಿದವನು ನಾನು. ಇದರ ಬಗ್ಗೆ ಯಾವುದೇ ವೇದಿಕೆಯಲ್ಲಿ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ. ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಚುನಾವಣೆಯಲ್ಲಿ ಗೆಲ್ಲಿಸಲು ದರಿದ್ರ ನಾರಾಯಣ ರ್ಯಾಲಿ ಮಾಡಿದೆವು. ಆ ಸಮಾವೇಶಕ್ಕೆ ಇವತ್ತಿನ ಅಹಿಂದ ನಾಯಕ ಸಿದ್ದರಾಮಯ್ಯ ಬರಲೇ ಇಲ್ಲ. ವೇದಿಕೆಯ ಕಾರ್ಯಕ್ರಮ ಮುಗಿಯುವ ಕೊನೆ ಹಂತದಲ್ಲಿ ಅವರು ಬಂದರು. ಇದು ಅವರಿಗಿರುವ ಸಾಮಾಜಿಕ ನ್ಯಾಯದ ಕುರಿತ ಬದ್ಧತೆ ಎಂದು ಮಾಜಿ ಪ್ರಧಾನಿ ದೇವೇಗೌಡ ಕಿಡಿಕಾರಿದರು.

sambrama prabha editor suresh kt

LEAVE A REPLY

Please enter your comment!
Please enter your name here