ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ಸೇರಿದಂತೆ ತ್ರಿಭಾಷೆಗೆ ಅಂಕಗಳನ್ನು ರದ್ದುಪಡಿಸಿ ಗ್ರೇಡ್ ನೀಡಲು ನಿರ್ಧರಿಸಿರುವ ಸರ್ಕಾರದ ತೀರ್ಮಾನವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ ಬೆನ್ನಲ್ಲೇ, ರಾಜ್ಯದ್ಯಂತ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯಪಾಲರು ತಮ್ಮ ಆದೇಶವನ್ನು ಹಿಂಪಡೆಯದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಲೋಕ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆವೊಡ್ಡಿದ್ದಾರೆ.
ರಾಜ್ಯದ ಮೊದಲ ಪ್ರಜೆ ಎನಿಸಿಕೊಂಡವರು ಹಿಂದಿ ಏಜೆಂಟ್ ರೀತಿ ಕೆಲಸ ಮಾಡಬಾರದು. ಎಸ್‌ಎಸ್‌ಎಲ್‌ಸಿಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾದಾಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಏನು ಮಾಡುತ್ತಿದ್ದರು? ಹಿಂದಿ ಪರವಾಗಿ ಮಾತನಾಡುವ ರಾಜ್ಯಪಾಲರು ನಮಗೆ ಬೇಡ. ತಮ್ಮ ರಾಜ್ಯಕ್ಕೆ ವಾಪಸ್ ಹೋಗಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ (ಏ.6) ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದಿ ಏರಿಕೆ ಮಾಡಿದರೆ ಕನ್ನಡಪರ ಸಂಘಟನೆಗಳ ಸಹಿಸುವುದಿಲ್ಲ. ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ. ರಾಜ್ಯಪಾಲರು ಹಿಂದಿ ಪರವಾಗಿ ನಿಂತರೆ, ಹಿಂದಿ ಭಾಷೆ ಏರಿಕೆ ಮಾಡಿದರೆ ರಾಜ್ಯದಲ್ಲಿ ರಕ್ತಕ್ರಾಂತಿ ಸಂಭವಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರು
ಕಳೆದ ಕೆಲವು ಸಮಯದಿಂದ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ವಿವಿಧ ಮಸೂದೆಗಳು ಮತ್ತು ಆಡಳಿತಾತ್ಮಕ ನಿರ್ಧಾರಗಳ ವಿಚಾರದಲ್ಲಿ ಶೀತಲ ಸಮರ ನಡೆಯುತ್ತಲೇ ಇದೆ. ಈಗ ಹಿಂದಿ ಭಾಷೆಯ ಮೌಲ್ಯಮಾಪನ ವಿಚಾರವು ಈ ಸಮರಕ್ಕೆ ಹೊಸ ತಿರುವು ನೀಡಿದೆ. ಸರ್ಕಾರದ ನೀತಿ ನಿರೂಪಣೆಯಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯಪಾಲರ ಕ್ರಮ ಸರಿಯಾಗಿದೆ ಎನ್ನುವುದು ಮತ್ತೊಂದೆಡೆ ಕೇಳಿ ಬಂದಿದೆ.
ರಾಜ್ಯದಲ್ಲಿ ಇದುವರೆಗೆ 625 ಅಂಕಗಳಿಗೆ ನಡೆಯುತ್ತಿದ್ದ ಪರೀಕ್ಷೆಯನ್ನು ಇನ್ನು ಮುಂದೆ 525 ಅಂಕಗಳಿಗೆ ಇಳಿಸಲು ಸರ್ಕಾರ ಇತ್ತೀಚೆಗಷ್ಟೇ ತೀರ್ಮಾನಿಸಿದೆ. ಮೂರನೇ ಭಾಷೆಯಾಗಿರುವ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಹೇರಬಾರದು ಎಂದು ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳಿಂದ ತೀವ್ರ ಒತ್ತಡಗಳು ಕೇಳಿಬಂದಿದ್ದವು. ಒಟ್ಟು 1,64 ಲಕ್ಷ ವಿದ್ಯಾರ್ಥಿಗಳು ಮೂರನೇ ಭಾಷೆಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು, ಅದರಲ್ಲಿ 1,48 ಲಕ್ಷ ವಿದ್ಯಾರ್ಥಿಗಳು ಕೇವಲ ಹಿಂದಿ ಭಾಷೆಯಲ್ಲಿಯೇ ಫೇಲ್ ಆಗಿರುವ ಆತಂಕಕಾರಿ ದತ್ತಾಂಶವನ್ನು ಸಚಿವ ಮಧು ಬಂಗಾರಪ್ಪ ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೂರನೇ ಭಾಷೆಗೆ ಕಡ್ಡಾಯವಾಗಿ ಪರೀಕ್ಷೆ ಬರೆಯಬೇಕಾದರೂ, ಅದರ ಅಂಕಗಳನ್ನು ಮುಖ್ಯ ಫಲಿತಾಂಶಕ್ಕೆ ಪರಿಗಣಿಸದೆ ಕೇವಲ ಗ್ರೇಡ್ ನೀಡುವ ವ್ಯವಸ್ಥೆಯನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲಾಗುತ್ತಿದೆ. ಅಧಿಕೃತ ಆದೇಶವು ಇದೇ ತಿಂಗಳ ಅಂತ್ಯದೊಳಗೆ ಹೊರಬೀಳಲಿದೆ ಎಂದು ತಿಳಿಸಿದ್ದರು.



