Updated By: Priyalachhi
ಬೆಳಗಾವಿ: ಜನಾರ್ದನ ರೆಡ್ಡಿ ಲೂಟಿ ಮಾಡಿಯೇ ಜೈಲಿಗೆ ಹೋಗಿದ್ದರಲ್ಲ. ಅವರಿಗೆ ಏನು ನೈತಿಕತೆ ಇದೆ. ಮತ್ತೆ ಬಳ್ಳಾರಿಗೆ ಬರಬೇಡಿ ಅಂತಾ ಅವರಿಗೆ ಯಾಕೆ ನಿರ್ಬಂಧ ವಿಧಿಸಲಾಗಿತ್ತು. ಈಗಲೂ ಕೂಡ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿಎಂ, 12 ಸಚಿವರು ಮತ್ತು ತಾವು ರಾಜ್ಯವನ್ನು ಲೂಟಿ ಮಾಡುತ್ತಿದ್ದೀರಿ ಎಂಬ ಶಾಸಕ ಜನಾರ್ದನ ರೆಡ್ಡಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ವಿರೋಧ ಪಕ್ಷಗಳಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಸುಳ್ಳು ಆರೋಪದ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಈಗ ಅಧಿವೇಶನ ಶುರು ಆಗುತ್ತದೆ. ಆಗ ಮಾತನಾಡಲಿ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.
ಸುಪ್ರೀಂಕೋರ್ಟ್ನಲ್ಲಿ ಗಡಿ ವಿಚಾರ: ಜನವರಿ 21ರಂದು ಗಡಿ ವಿಚಾರಣೆ ಆರಂಭವಾಗುತ್ತಿದೆ. ಹಾಗಾಗಿ, ಒಳ್ಳೆಯ ವಕೀಲರನ್ನು ನಾವು ನೇಮಿಸುತ್ತೇವೆ. ಗಡಿ ವಿಚಾರದಲ್ಲಿ ಕರ್ನಾಟಕ ವಿರುದ್ಧ ಪ್ರಕರಣ ಹಾಕಲು ಮಹಾರಾಷ್ಟ್ರದವರಿಗೆ ಅವಕಾಶವೇ ಇಲ್ಲ. ವ್ಯಾಪ್ತಿ ಮೇಲೆ ನಮ್ಮ ತಕರಾರು ಇದೆ. ಗಡಿ ವಿವಾದ ಇತ್ಯರ್ಥಪಡಿಸುವ ಅಧಿಕಾರ ಯಾರಿಗೆ ಎಂಬುದು ತೀರ್ಮಾನ ಆಗಬೇಕು. ನಾವು ನ್ಯಾಯಾಂಗ ಮಾರ್ಗದಲ್ಲಿ ಸಾಗುತ್ತೇವೆ. ಗಡಿ ವಿಚಾರಣೆ ನ್ಯಾಯಾಂಗದಲ್ಲಿ ಬರಬೇಕೋ, ಬರಬಾರದೋ ಎನ್ನುವುದು ಮೊದಲು ತೀರ್ಮಾನ ಆಗಬೇಕಿದೆ. ಆಮೇಲೆ ನೋಡೋಣ ಎಂದು ಸಿಎಂ ಹೇಳಿದರು.
ನಿಜವಾದ ಮತದಾರರು ಬಿಟ್ಟುಹೋಗಬಾರದು: ಮತದಾರರ ಪಟ್ಟಿಯಲ್ಲಿ ಮೂರು ಕೋಟಿ ಜನರ ಹೆಸರು ಮಿಸ್ ಆಗಿರುವ ವಿಚಾರಕ್ಕೆ ಕಾಂಗ್ರೆಸ್ನಿಂದ ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದೇವೆ. ಎಸ್ಐಆರ್ ಮಾಡುವಾಗ ಎಚ್ಚರಿಕೆಯಿಂದ ಮಾಡಲು ಬಿಎಲ್ಎಗಳಿಗೆ ಸೂಚನೆ ನೀಡಿದ್ದೇವೆ. ಅದರಲ್ಲಿ ರಾಜಕೀಯ ಮಾಡಲ್ಲ. ನಿಜವಾದ ಮತದಾರರು ಬಿಟ್ಟುಹೋಗಬಾರದು ಎಂದರು.



