ವಜಾ ಮಾಡಿದ ಸಾಲದ ಮೊತ್ತದಲ್ಲಿ ಎಷ್ಟು ಪಾಲು ಮೋದಿ ಆಪ್ತ ಸ್ನೇಹಿತರ ಕಂಪನಿಗಳಿಗೆ ಸೇರಿದೆ? ಪ್ರಧಾನಿಗಳೇ ಉತ್ತರಿಸುವಿರಾ?

0
40

Updated By: Priyalachhi

ಬೆಂಗಳೂರು: ಕೇಂದ್ರ ಹಣಕಾಸು ಸಚಿವಾಲಯವು ಬಹಿರಂಗಪಡಿಸಿರುವ ಅಂಕಿ-ಅಂಶ ಆಘಾತಕಾರಿ ಮಾತ್ರವಲ್ಲ, ಸ್ಪಷ್ಟವಾಗಿ ಜನವಿರೋಧಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕೇವಲ ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ₹6,15,647 ಕೋಟಿ ಸಾಲವನ್ನು ವಜಾಮಾಡಿದೆ — ವರ್ಷಕ್ಕೆ ಸರಾಸರಿ ₹1,23,129 ಕೋಟಿ ವಜಾ ಮಾಡಿದ್ದಾರೆ.

ಒಂದು ವರ್ಷದ ಅವಧಿಯಲ್ಲಿ ವಜಾ ಮಾಡಿರುವ ಬ್ಯಾಂಕ್ ಸಾಲದ ಮೊತ್ತವು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನ ಮಟ್ಟ ಸುಧಾರಣೆಗಾಗಿ ನೇರವಾಗಿ ಅವರಿಗೆ ನೀಡಲಾಗುತ್ತಿರುವ ಕರ್ನಾಟಕದ ಗ್ಯಾರಂಟಿ ಯೋಜನೆಗಳ ವಾರ್ಷಿಕ ವೆಚ್ಚಕ್ಕಿಂತ ದುಪ್ಪಟ್ಟಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಾವು ಜನಸಾಮಾನ್ಯರ ಪರ ಎಂದು ಬೊಗಳೆ ಬಿಡುವ ಬಿಜೆಪಿ ಸದ್ದಿಲ್ಲದಂತೆ ಶ್ರೀಮಂತ ಉದ್ಯಮಿಗಳ ಸಾಲವನ್ನು ವಜಾ ಮಾಡಿ, ಅವರ ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳನ್ನು ಬೆಂಬಲಿಸುತ್ತಿದೆ. ಇದು ಬೆವರು-ರಕ್ತ ಹರಿಸಿ ಸಂಪಾದಿಸಿದ ಗಳಿಕೆಯಲ್ಲಿ ತೆರಿಗೆ ನೀಡುತ್ತಿರುವ ಭಾರತೀಯರಿಗೆ ಬಗೆಯುತ್ತಿರುವ ದ್ರೋಹವಾಗಿದೆ ಎಂದು ಕಿಡಿಕಾರಿದ್ದಾರೆ.

ವಜಾ ಮಾಡಿದ ಸಾಲದ ಮೊತ್ತದಲ್ಲಿ ಎಷ್ಟು ಪಾಲು ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ನಿಕಟ ಸ್ನೇಹಿತರ ಕಂಪನಿಗಳಿಗೆ ಸೇರಿದೆ? ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಉದಾರವಾಗಿ ದೇಣಿಗೆ ನೀಡಿದವರ ಎಷ್ಟು ಕೋಟಿ ಸಾಲ ವಜಾ ಆಗಿದೆ? 2014–2020ರ ಅವಧಿಯಲ್ಲಿ ವಜಾ ಮಾಡಲಾದ ಸಾಲದ ಮೊತ್ತದಲ್ಲಿ ಎಷ್ಟು ಹಣ ನಿಜವಾಗಿ ವಸೂಲಾಗಿದೆ? ಸನ್ಮಾನ್ಯ‌ ಪ್ರಧಾನಿಗಳೇ ಈ ಪ್ರಶ್ನೆಗಳಿಗೆ ಉತ್ತರಿಸುವಿರಾ? ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here