Updated By: Priyalachhi
ಮೈಸೂರು: ರಾಜ್ಯ ಬಜೆಟ್ ಮಂಡಿಸುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಬಜೆಟ್ ಪೂರ್ವ ಉಡುಗೊರೆಯನ್ನು ನೀಡಿದ್ದು, ರಾಜ್ಯಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ವರುಣಾ ಕ್ಷೇತ್ರಕ್ಕೆ ಮತ್ತೊಮ್ಮೆ 320 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡುವ ಮೂಲಕ ಸಿದ್ದರಾಮಯ್ಯ ರಾಜ್ಯ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ನಾಯಕತ್ವ ಬದಲಾವಣೆಯ ಊಹಾಪೋಹಗಳ ನಡುವೆ ಒಂದು ವಿದಾಯ ಉಡುಗೊರೆಯೇ ಅಥವಾ ಅವರ ವಂಶಪರಂಪರೆ ರಾಜಕೀಯ ಭದ್ರಪಡಿಸಿಕೊಳ್ಳುವ ಲೆಕ್ಕಾಚಾರದ ಕ್ರಮವೇ? ಎಂಬ ಪ್ರಶ್ನೆ ಮೂಡಿಸಿದೆ.
ಶಂಕುಸ್ಥಾಪನಾ ಸಮಾರಂಭದ ಸಮಯವು ರಾಜಕೀಯವಾಗಿ ಮಹತ್ವದ್ದಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಸಂಭಾವ್ಯ ಬದಲಾವಣೆಯ ಬಗ್ಗೆ ಊಹಾಪೋಹಗಳು ಹರಡಿರುವಾಗ, ಸಿದ್ದರಾಮಯ್ಯ ಅವರು ದಶಕಗಳಿಂದ ಪ್ರತಿನಿಧಿಸುವ ಕ್ಷೇತ್ರದಿಂದ ಬಲವಾದ ಸಂದೇಶ ನೀಡಲು ಆಯ್ಕೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ನಾಯಕರು ಈ ನಡೆಯನ್ನು ಸಾಂಕೇತಿಕ ಮತ್ತು ಕಾರ್ಯತಂತ್ರದ ಭಾಗ ಎನ್ನುತ್ತಿದ್ದಾರೆ. ಆದರೆ ಅವರ ಆಪ್ತರು ಇದನ್ನು ಬೇರೆಯದ್ದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.
ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆ ಹೊಂದಿರುವ ಸಿದ್ದರಾಮಯ್ಯ, ಭಾನುವಾರ ವರುಣ ಕ್ಷೇತ್ರದ ಕುಪ್ಪಾಯ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ 15 ಇಲಾಖೆಗಳನ್ನು ಒಳಗೊಂಡ 154 ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಯೋಜನೆಗಳು ಮೂಲಸೌಕರ್ಯ ಮತ್ತು ನಗರಾಭಿವೃದ್ಧಿಯಿಂದ ಹಿಡಿದು ಆರೋಗ್ಯ ಮತ್ತು ಸಮಾಜ ಕಲ್ಯಾಣದವರೆಗೆ ವ್ಯಾಪ್ತಿಸಿದೆ. ಅಲ್ಪಾವಧಿಗಿಂತ ಹೆಚ್ಚಾಗಿ ವರುಣಾ ಕ್ಷೇತ್ರದ ಅಭಿವೃದ್ಧಿಯನ್ನು ದೂರದೃಷ್ಟಿಯಿಂದ ಕೈಗೆತ್ತಿಕೊಳ್ಳಲಾಗಿದೆ ಎಂದಿದ್ದಾರೆ.



