Updated By: Priyalachhi
ಬಳ್ಳಾರಿ/ಎರ್ನಾಕುಲಂ: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಚಿನ್ನ ಕಳವು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಶುಕ್ರವಾರ ಬಳ್ಳಾರಿಯ ಚಿನ್ನದ ಉದ್ಯಮಿ ಸೇರಿದಂತೆ ಇಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಬರಿಮಲೆ ದೇಗುಲದಲ್ಲಿ ಕಲಾಕೃತಿಗಳಿಗೆ ವಿದ್ಯುತ್ ಲೇಪನ ಮಾಡಿದ್ದ ‘ಸ್ಮಾರ್ಟ್ ಕ್ರಿಯೇಷನ್ಸ್’ ಸಿಇಒ ಪಂಕಜ್ ಭಂಡಾರಿ ಹಾಗೂ ಬಳ್ಳಾರಿಯ ಚಿನ್ನದ ಉದ್ಯಮಿ ಗೋವರ್ಧನ್ ಬಂಧಿತ ಆರೋಪಿಗಳು. ಇವರಿಬ್ಬರನ್ನು ವಶಕ್ಕೆ ಪಡೆದು ತಿರುವನಂತಪುರದಲ್ಲಿರುವ ಅಪರಾಧ ವಿಭಾಗದ ಕಚೇರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿ, ಬಳಿಕ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಪ್ರಕರಣ ಸಂಬಂಧ ಕೇರಳದ ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ಬಂಧಿಸಲಾಗಿತ್ತು. 2019ರಲ್ಲಿ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ದ್ವಾರಪಾಲಕರ ಮೂರ್ತಿಗಳು ಹಾಗೂ ಗರ್ಭಗುಡಿಯ ದ್ವಾರಕ್ಕೆ ವಿದ್ಯುತ್ ಲೇಪನಕ್ಕಾಗಿ ಸ್ಮಾರ್ಟ್ ಕ್ರಿಯೇಷನ್‌ಗೆ ತೆಗೆದಕೊಂಡು ಹೋಗಿದ್ದ. ಆ ವೇಳೆ ಅದರಲ್ಲಿದ್ದ ಚಿನ್ನವನ್ನು ತೆಗೆಯಲಾಗಿದೆ ಎನ್ನುವುದು ಎಸ್‌ಐಟಿ ತನಿಖೆಯಲ್ಲಿ ಗೊತ್ತಾಗಿದೆ. ವಿದ್ಯುತ್ ಲೇಪನದ ವೇಳೆ 400 ಗ್ರಾಂಗೂ ಅಧಿಕ ಚಿನ್ನವನ್ನು ತೆಗೆದು ಅದನ್ನು ಗೋವರ್ಧನ್ಗೆ ಹಸ್ತಾಂತರಿಸಲಾಗಿದೆ ಎಂದು ಪೊಟ್ಟಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ದ್ವಾರಪಾಲಕ ಮೂರ್ತಿಗಳ ಚಿನ್ನಗಳವು ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ಪ್ರಕರಣದದಲ್ಲಿ ಪಂಕಜ್ ಭಂಡಾರಿ ಹಾಗೂ ಗೋವರ್ಧನ್ ಅವರನ್ನು ಎಸ್‌ಐಟಿ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ, ಹೆಚ್ಚಿನ ಸಾಕ್ಷಿಗಳು ಪತ್ತೆಯಾಗಿದ್ದವು. ಈಗಾಗಲೇ ಎಸ್‌ಐಟಿ ಗೋವರ್ಧನ್ ಚಿನ್ನದ ಅಂಗಡಿಯಿಂದ 400 ಗ್ರಾಂ ಚಿನ್ನ ವಶಪಡಿಸಿಕೊಂಡಿದೆ. ಭಂಡಾರಿ ಹಾಗೂ ಗೋವರ್ಧನ ಪ್ರಕರಣದಲ್ಲಿ ಬಂಧಿತರಾದ 8 ಹಾಗೂ 9ನೇ ಆರೋಪಿಗಳಾಗಿದ್ದಾರೆ. ಬಂಧಿತರನ್ನು ಕೋಲಂನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



