Updated By: Priyalachhi
ಬೆಂಗಳೂರು: ಸಾರಿಗೆ ನೌಕರರ ರಜೆ ನಗದೀಕರಣ (ಇಎಲ್) ಪಾವತಿಯಲ್ಲಿ ವಿಳಂಬ ಮಾಡಿದ ಪರಿಣಾಮ ಶೇ.6ರಷ್ಟು ಬಡ್ಡಿ ಸೇರಿಸಿ ಮುಂದಿನ 12 ವಾರಗಳಲ್ಲಿ ಪಾವತಿ ಮಾಡಬೇಕು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್ ಡಬ್ಲ್ಯೂಕೆಆರ್‌ಟಿಸಿ)ಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಎನ್ಡಬ್ಲ್ಯೂಕೆಆರ್ಟಿಸಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಯಲ್ಲಪ್ಪ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ನಿವೃತ್ತಿಯ ಬಳಿಕ 10 ರಿಂದ 25 ತಿಂಗಳು ಕಳೆದರೂ ಅವರಿಗೆ ಲಭ್ಯವಾಗಬೇಕಾದ ಇಎಲ್ ನಗದೀಕರಣ ಮಾಡುವುದಕ್ಕೆ ನಿಗಮ ಮುಂದಾಗಿಲ್ಲ. ಅಲ್ಲದೇ, ಇಎಲ್ ಪಾವತಿಗೆ ವಿಳಂಬವಾಗಿದ್ದರೂ, ಬಡ್ಡಿ ಪಾವತಿಸಿಲ್ಲ. ಆದ್ದರಿಂದ ಮುಂದಿನ 12 ವಾರಗಳಲ್ಲಿ ಬಡ್ಡಿಯನ್ನು ಪಾವತಿಸಬೇಕು. ಬಡ್ಡಿಯನ್ನು ಪಾವತಿಸುವಲ್ಲಿ ವಿಳಂಬ ಮಾಡಿದಲ್ಲಿ ಶೇ.9ರ ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ಪೀಠ ತಿಳಿಸಿದೆ.
ಅಲ್ಲದೇ, ನಿವೃತ್ತ ನೌಕರರ ಬೇಡಿಕೆಯಂತೆ ರಜೆ ನಗದೀಕರಣಕ್ಕಾಗಿ ಶೇ.9 ರಿಂದ 10 ರಷ್ಟು ಬಡ್ಡಿಯನ್ನು ಸೇರಿಸಬೇಕಾಗಿದೆ. ಆದರೆ, ಅರ್ಜಿದಾರರು ನಿವೃತ್ತರಾದ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ಶೇ.5.58 ರಷ್ಟು ಬಡ್ಡಿದರವಿತ್ತು ಆದ್ದರಿಂದ ಶೇ.6 ರಷ್ಟು ಬಡ್ಡಿಯನ್ನು ಸೇರಿಸಿ ಪಾವತಿ ಮಾಡಬೇಕು ಎಂದು ನಿಗಮಕ್ಕೆ ಸೂಚನೆ ನೀಡಿರುವುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ನೌಕರರ ರಜೆ ನಗದು ಪಾವತಿಗೆ ವಿಳಂಬ ಮಾಡಿರುವುದರಿಂದ ಅದಕ್ಕೆ ಪರಿಹಾರ ಪಡೆಯುವ ಹಕ್ಕು ನೌಕರರಿಗಿದೆ. ಸಾರ್ವಜನಿಕ ನಿಧಿಯಿಂದ ಸಾರ್ವಜನಿಕ ಸಾರಿಗೆ ನಿಗಮಗಳು ಎದುರಿಸುತ್ತಿರುವ ಆರ್ಥಿಕ ವಾಸ್ತವಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಪೀಠ ಇದೇ ವೆಳೆ ಸಲಹೆ ನೀಡಿದೆ.
ಉಚಿತ ಪ್ರಯಾಣ ನೀತಿ ಮತ್ತಷ್ಟು ಆರ್ಥಿಕ ಸಂಕಷ್ಟ: ಸಾರಿಗೆ ನಿಗಮಗಳ ಸಂಬಂಧ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕಾಗಿ 2 ಸಾವಿರ ಕೋಟಿ ರೂ. ಸಾಲ ಪಡೆಯಬೇಕಾಗಿದೆ ಎಂದು ದಾಖಲೆಗಳಿಂದ ತಿಳಿಯಲಿದೆ. ಕೋವಿಡ್-19ರಿಂದ ಸಾರಿಗೆ ನಿಗಮಗಳಿಗೆ ಉಂಟಾದ ಆರ್ಥಿಕ ಸಂಕಷ್ಟ ಎರಡು ವರ್ಷಗಳ ಕಳೆದೂ ಇಂದಿಗೂ ಮುಂದುವರೆಯುತ್ತಿದೆ. 2022ರಲ್ಲಿ ನಿಗಮದ ನೌಕರರು ಕೈಗೊಂಡ ಮುಷ್ಕರವು ನಿಗಮಗಳ ಆರ್ಥಿಕೆ ಸಮಸ್ಯೆ ಹೆಚ್ಚಾಗುವುದಕ್ಕೆ ಕಾರಣವಾಯಿತು. ಅಲ್ಲದೆ, ಸರ್ಕಾರ ಘೋಷಣೆ ಮಾಡಿರುವ ಉಚಿತ ಪ್ರಯಾಣದ ನೀತಿಯೂ ನಿಗಮದ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ ಉಂಟಾಗಲು ಕಾರಣವಾಗಿದೆ ಎಂದು ಪೀಠ ಇದೇ ವೇಳೆ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ : ಅರ್ಜಿದಾರರ 1982ರಲ್ಲಿ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿಗೆ ಕಂಡಕ್ಟರ್ ಆಗಿ ನೇಮಕಗೊಂಡಿದ್ದರು. 2020ರಲ್ಲಿ ನಿವೃತ್ತಿ ಹೊಂದಿದ್ದರು. ಈ ವೇಳೆ ಅರ್ಜಿದಾರರಿಗೆ ರಜೆ ನಗದೀಕರಣವನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ಸೌಲಭ್ಯಗಳನ್ನು ನೀಡಲಾಗಿತ್ತು. ನಿವೃತ್ತಿಯ ಬಳಿಕ ರಜೆ ನಗದೀಕರಣ ವಿಳಂಬ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.



