Updated By: Priyalachhi
ನವದೆಹಲಿ/ಹುಬ್ಬಳ್ಳಿ: ರಾಜ್ಯದಿಂದ ಬೆಂಬಲ ಬೆಲೆಯಲ್ಲಿ 1 ಲಕ್ಷ ಮೆಟ್ರಿಕ್ ಟನ್ ಕಡಲೆ ಖರೀದಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಈ ಮೂಲಕ ಕೇಂದ್ರವು ಸಂಕಷ್ಟ ಸಮಯದಲ್ಲಿ ರಾಜ್ಯದ ಕಡಲೆ ಬೆಳೆಗಾರರ ಬೆಂಬಲಕ್ಕೆ ಬಂದಿದೆ.
ಬೆಂಬಲ ಬೆಲೆ ಯೋಜನೆಯಡಿ ಕನಿಷ್ಠ ಬೆಂಬಲ ಬೆಲೆ(MSP) 5,875 ರೂ. ದರದಲ್ಲಿ ಒಟ್ಟು 1,01,340 ಮೆಟ್ರಿಕ್ ಟನ್ ಹಿಂಗಾರು ಹಂಗಾಮಿನ ಕಡಲೆ ಕಾಳು ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಪತ್ರದ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ.
ಗಮನ ಸೆಳೆದಿದ್ದ ಪ್ರಲ್ಹಾದ ಜೋಶಿ: ಕರ್ನಾಟಕದ ಪ್ರಮುಖ ದ್ವಿದಳ ಧಾನ್ಯಗಳಲ್ಲಿ ಕಡಲೆಯೂ ಒಂದಾಗಿದ್ದು, ಸುಮಾರು 9.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಉತ್ಪಾದನೆ ಆಗುತ್ತದೆ. ಆದರೆ, ಪ್ರಸ್ತುತ ಮಾರುಕಟ್ಟೆ ಬೆಲೆಗಿಂತ ತೀರಾ ಕಡಿಮೆ ಬೆಲೆಯಿಂದಾಗಿ ಕಡಲೆ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ, ಬೆಂಬಲ ಬೆಲೆಯಲ್ಲಿ ಖರೀದಿಗೆ ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಸಚಿವ ಪ್ರಲ್ಹಾದ್ ಜೋಶಿ ಪತ್ರ ಬರೆದು ಗಮನ ಸೆಳೆದಿದ್ದರು.
ಕಡಲೆಗೆ ಪ್ರಸ್ತುತ ಮಾರುಕಟ್ಟೆ ಬೆಲೆ RMS 2026-27ಕ್ಕೆ ಘೋಷಿಸಲಾದ ಪ್ರತಿ ಕ್ವಿಂಟಾಲ್ಗೆ 5,875 ರೂ.ಗಳು ಎಂಎಸ್ಪಿಗಿಂತ ತುಂಬಾ ಕಡಿಮೆಯಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಕಡಲೆ ಬೆಲೆ ಮತ್ತಷ್ಟು ಕುಸಿಯುವ ಆತಂಕವಿದೆ. ಆದ್ದರಿಂದ, ಕರ್ನಾಟಕದಲ್ಲಿ ಕಡಲೆ(ಚನಾ)ಗೆ ಬೆಂಬಲ ಬೆಲೆ ಯೋಜನೆ (PSS) ಅನ್ನು ಆದ್ಯತೆ ಮೇರೆಗೆ ಜಾರಿಗೆ ತರುವ ಅವಶ್ಯಕತೆಯಿದೆ ಎಂದು ಪ್ರಲ್ಹಾದ್ ಜೋಶಿ ಪತ್ರದಲ್ಲಿ ವಿವರಿಸಿದ್ದರು.
ಜೋಶಿ ಅವರ ಮನವಿಗೆ ಸ್ಪಂದಿಸಿದ ಕೃಷಿ ಸಚಿವರು ರಾಜ್ಯದ ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆಯಲ್ಲಿ 1 ಲಕ್ಷ ಮೆಟ್ರಿಕ್ ಟನ್ಗೂ ಹೆಚ್ಚು ಕಡಲೆ ಖರೀದಿಸಲು ರಾಜ್ಯ ಸರ್ಕಾರಕ್ಕೆ ಅನುಮೋದನೆ ನೀಡಿದ್ದಾರೆ.



