ಅಂತಿಮ ಘಟ್ಟಕ್ಕೆ ತಲುಪಿದ ರಾಜ್ಯ ‘ಪವರ್ ಫೈಟ್’

0
38

Updated By: Priyalachhi

ಬೆಂಗಳೂರು: ದೆಹಲಿ ಅಂಗಳಕ್ಕೆ ತಲುಪಿರುವ ರಾಜ್ಯ ಕಾಂಗ್ರೆಸ್ ಪವರ್ ಫೈಟ್ ಇದೀಗ ಅಂತಿಮ‌ ಘಟ್ಟಕ್ಕೆ ತಲುಪಿದಂತೆ ಕಂಡು ಬರುತ್ತಿದೆ.‌ ಹೈ ಕಮಾಂಡ್ ಬಹುತೇಕ ಒಂದು ತೀರ್ಮಾನಕ್ಕೆ ಬಂದಿದ್ದು, ಸದ್ಯದಲ್ಲೇ ಉಭಯ ನಾಯಕರನ್ನು ಕರೆಸಿ ಪಟ್ಟದ ಗೊಂದಲವನ್ನು ಬಗೆಹರಿಸಲಿದೆ.

ಕುತೂಹಲ ಘಟ್ಟಕ್ಕೆ ತಲುಪಿರುವ ರಾಜ್ಯದ ಪವರ್ ಫೈಟ್ ಇದೀಗ ಬಹುತೇಕ ಅಂತಿಮ ಹಂತಕ್ಕೆ ತಲುಪಿದಂತೆ ಕಂಡು ಬರುತ್ತಿದೆ. ಪವರ್ ಫೈಟ್ ಹಿನ್ನೆಲೆ ಬಣ ರಾಜಕೀಯ ಉಲ್ಬಣಗೊಂಡಿದ್ದು, ಹೈ ಕಮಾಂಡ್​ಗೆ ಶೀಘ್ರ ಒಂದು ತೀರ್ಮಾನಕ್ಕೆ ಬರುವ ಅನಿವಾರ್ಯತೆ ಎದುರಾಗಿದೆ.‌ ಇತ್ತ ಮೂರು ನಾಲ್ಕು ದಿನಗಳ ಕಾಲ ಬೆಂಗಳೂರಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯರ ಜೊತೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಇತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಖರ್ಗೆ ಬಳಿ ಅಧಿಕಾರ ಹಂಚಿಕೆಯ ಮಾತುಕತೆ ನಡೆಸಿದ್ದಾರೆ. ಸದ್ಯ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ರಾಜ್ಯ ರಾಜಕೀಯದ ಬಗ್ಗೆ ಮಾಹಿತಿ ನೀಡಲಿದ್ದಾರೆ.‌

ಪವರ್ ಫೈಟ್ ಗೊಂದಲಕ್ಕೆ ಹೈ ಕಮಾಂಡ್ ಶೀಘ್ರ ತೆರೆ: ರಾಜ್ಯ ಕಾಂಗ್ರೆಸ್ ಪಾಳಯದ ಪವರ್ ಫೈಟ್ ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಹೈ ಕಮಾಂಡ್ ಅಂಗಳಕ್ಕೆ ತಲುಪಿದೆ. ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜೊತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಕಾಂಗ್ರೆಸ್ ಪಾಳಯದ ಮೂಲಗಳು ತಿಳಿಸಿವೆ. ರಾಜ್ಯ ಕಾಂಗ್ರೆಸ್ ಪಾಳಯದಲ್ಲಿನ ಪವರ್ ಫೈಟ್ ಗೊಂದಲ ತಾರಕಕ್ಕೇರಿದ್ದು, ಶೀಘ್ರ ಗೊಂದಲ ನಿವಾರಿಸುವ ಅನಿವಾರ್ಯತೆಯನ್ನು ಹೈಕಮಾಂಡ್ ಮನಗಂಡಿದೆ. ಹೀಗಾಗಿ ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಉಭಯ ನಾಯಕರನ್ನು ಕರೆಸಿ ಅಧಿಕಾರ ಹಂಚಿಕೆಯ ಗೊಂದಲ ನಿವಾರಿಸಲಿದೆ ಎಂದು ಡಿಕೆಶಿ ಆಪ್ತ ಬಣ ತಿಳಿಸಿದೆ.‌

ಇತ್ತ ದೆಹಲಿಗೆ ತೆರಳಿದ್ದ ಡಿಸಿಎಂ ಡಿಕೆಶಿ ಆಪ್ತ ಶಾಸಕರ ಬಣ ಬೆಂಗಳೂರಿಗೆ ವಾಪಸಾಗಿದ್ದು, ಹೈ ಕಮಾಂಡ್ ಶೀಘ್ರ ಸಿಹಿ ಸುದ್ದಿ ಕೊಡುವ ವಿಶ್ವಾಸದಲ್ಲಿದೆ. ಡಿಕೆಶಿ ಪಾಳಯದಲ್ಲೂ ಅಧಿಕಾರ ಹಂಚಿಕೆಯ ಗೊಂದಲಕ್ಕೆ ತೆರೆ ಬೀಳುವ ನಿಟ್ಟಿನಲ್ಲಿ ಪೂರಕ ಬೆಳವಣಿಗೆಗಳು ನಡೆಯುತ್ತಿವೆ ಎಂಬ ಕುಷಿಯಲ್ಲಿದ್ದಾರೆ. ಶೀಘ್ರ ಹೈ ಕಮಾಂಡ್​ನಿಂದ ಸಿಹಿ ಸುದ್ದಿ ಬರಲಿದೆ ಎಂಬ ನಿರೀಕ್ಷೆಯಲ್ಲಿದೆ.‌ ಸದ್ಯದಲ್ಲೇ ಈ ಸಂಬಂಧ ತನ್ನ ತೀರ್ಮಾನವನ್ನು ಉಭಯ ನಾಯಕರನ್ನು ಕರೆಸಿ ಪ್ರಕಟಿಸಲಿದೆ ಎಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಿದೆ.

ದೆಹಲಿ ಸಂದೇಶ ಮುಟ್ಟಿಸಿದ ಸಚಿವ ಪ್ರಿಯಾಂಕ್ ಖರ್ಗೆ?: ಸಚಿವ ಪ್ರಿಯಾಂಕ್​ ಖರ್ಗೆ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದ್ದಾರೆ. ರಾಜ್ಯ ರಾಜಕೀಯ ವಿದ್ಯಾಮಾನಗಳ ಬಗ್ಗೆ ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದಾರೆ. ಭೇಟಿ ವೇಳೆ ರಾಹುಲ್ ಗಾಂಧಿ ನೀಡಿದ ಸಂದೇಶವನ್ನು ಸಚಿವ ಪ್ರಿಯಾಂಕ್​ ಖರ್ಗೆ ಉಭಯ ನಾಯಕರಾದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ಗೆ ಮುಟ್ಟಿಸಿದ್ದಾರೆ.

ಮಂಗಳವಾರ ದೆಹಲಿಯಿಂದ ವಾಪಸಾದ ಸಚಿವ ಪ್ರಿಯಾಂಕ್​ ಖರ್ಗೆ ನೇರವಾಗಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ರಾಹುಲ್ ಗಾಂಧಿ ನೀಡಿದ ಸಂದೇಶವನ್ನು ಮುಟ್ಟಿಸಿದ್ದಾರೆ. ಸುಮಾರು ಅರ್ಧ ಗಂಟೆ ಸಿಎಂ ಸಿದ್ದರಾಮಯ್ಯ ಬಳಿ ಚರ್ಚಿಸಿದ ಬಳಿಕ ಪ್ರಿಯಾಂಕ್ ಖರ್ಗೆ ನೇರವಾಗಿ ಡಿಸಿಎಂ ಸರ್ಕಾರಿ ನಿವಾಸಕ್ಕೆ ತೆರಳಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ರಾಹುಲ್ ಗಾಂಧಿ ಹೇಳಿರುವುದನ್ನು ಡಿಕೆಶಿ ಗಮನಕ್ಕೆ ತಂದಿದ್ದಾರೆ. ಹೈ ಕಮಾಂಡ್ ಒಂದು ತೀರ್ಮಾನಕ್ಕೆ ಬರಲಿದ್ದು, ಎರಡು ಮೂರು ದಿನಗಳಲ್ಲಿ ಅಧಿಕಾರ ಹಂಚಿಕೆಯ ಗೊಂದಲಕ್ಕೆ ತೆರೆ ಎಳೆಯುವ ಸುದ್ದಿ ನೀಡಲಿದೆ ಎಂದು ಉಭಯ ನಾಯಕರಿಗೆ ಸಂದೇಶ ನೀಡಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here