Updated By: Priyalachhi
ಉಡುಪಿ: ಭಯೋತ್ಪಾದಕ ದಾಳಿಯ ನಂತರ ಹಿಂದಿನ ಸರ್ಕಾರಗಳು ತಕ್ಕ ಪ್ರತಿಕ್ರಿಯೆ ನೀಡಲು ಹಿಂಜರಿಯುತ್ತಿದ್ದವು. ಆದರೆ ನವ ಭಾರತ ತನ್ನ ಜನರನ್ನು ರಕ್ಷಿಸಲು ಬದ್ಧವಾಗಿದ್ದು, ಯಾರ ಮುಂದೆಯೂ ತಲೆಬಾಗುವುದಿಲ್ಲ ಅಥವಾ ಹಿಂಜರಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಇಂದು ಉಡುಪಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಹಿಂದಿನ ಸರ್ಕಾರಗಳು ಭಯೋತ್ಪಾದಕ ದಾಳಿಯ ನಂತರ ಸುಮ್ಮನೆ ಕುಳಿತುಕೊಳ್ಳುತ್ತಿದ್ದವು. ಆದರೆ ನವ ಭಾರತ ತನ್ನ ಜನರನ್ನು ರಕ್ಷಿಸಲು ಬದ್ಧವಾಗಿದೆ ಮತ್ತು ಯಾರ ಮುಂದೆಯೂ ತಲೆಬಾಗುವುದಿಲ್ಲ ಅಥವಾ ಹಿಂಜರಿಯುವುದಿಲ್ಲ” ಎಂದರು.
ಒಂದು ಲಕ್ಷ ಜನ ಶ್ರೀಮದ್ ಭಗವದ್ಗೀತೆಯನ್ನು ಪಠಿಸಿದ “ಲಕ್ಷ ಕಂಠ ಗೀತಾ ಪಾರಾಯಣ”ದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಉಡುಪಿಗೆ ಆಗಮಿಸಿದ್ದರು. ಉಡುಪಿಯ ಶ್ರೀ ಕೃಷ್ಣ ಮಠವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
“ನಮಗೆ ಶಾಂತಿ ಸ್ಥಾಪನೆಯೂ ಗೊತ್ತು, ರಕ್ಷಣೆಯೂ ಗೊತ್ತು. ಸತ್ಯಕ್ಕಾಗಿ ಶ್ರಮಿಸಲು ಹಾಗೂ ದೌರ್ಜನ್ಯ ಎಸಗುವವರನ್ನು ಹತ್ತಿಕ್ಕುವ ಅಗತ್ಯವನ್ನು ಗೀತೆ ನಮಗೆ ಕಲಿಸುತ್ತದೆ. ನಾವು ವಸುಧೈವ ಕುಟುಂಬಕಂನಲ್ಲಿ ನಂಬಿಕೆ ಇಟ್ಟಿದ್ದೇವೆ ಮತ್ತು ‘ಧರ್ಮೋ ರಕ್ಷತಿ ರಕ್ಷಿತಃ'(ಧರ್ಮವನ್ನು ರಕ್ಷಿಸುವವರನ್ನು ಧರ್ಮ ರಕ್ಷಿಸುತ್ತದೆ) ಎಂದು ಪಠಿಸುತ್ತೇವೆ” ಎಂದರು.



