Updated By: Priyalachhi
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇನ್ (ಕೆಎಸ್ಸಿಎ) ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಕೆ.ಎನ್. ಶಾಂತಕುಮಾರ್ ಅವರು ಸಲ್ಲಿಸಿರುವ ನಾಮಪತ್ರವನ್ನು ಅಂಗೀಕರಿಸಲು ಸೂಚನೆ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ದ್ವಿಸದಸ್ಯ ಪೀಠ ಎತ್ತಿಹಿಡಿದಿದೆ.
ಅಲ್ಲದೆ, ಶಾಂತಕುಮಾರ್ ಅವರ ನಾಮಪತ್ರ ಅಂಗೀಕರಿಸುವಂತೆ ನಿರ್ದೇಶನ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಕೆಎಸ್ಸಿಎ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದುಕೊಂಡಿದ್ದ ಕಲ್ಪನಾ ವೆಂಕಟಾಚಾರ್ ಎಂಬವರು ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಈ ಆದೇಶದಿಂದಾಗಿ ಕೆಎಸ್ಸಿಎ ಚುನಾವಣೆಯು ನಿಗದಿತ ದಿನಾಂಕವಾದ ಡಿಸೆಂಬರ್ 7ರಂದು ಚುನಾವಣೆ ನಡೆಯಲಿದೆ.
ಪ್ರಕರಣದ ಹಿನ್ನೆಲೆ: ಕೆಎಸ್ಸಿಎ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕೆ.ಎನ್. ಶಾಂತಕುಮಾರ್ ಅವರು ಚುನಾವಣಾಧಿಕಾರಿಯು ತಾಂತ್ರಿಕ ಕಾರಣಗಳಿಂದ ತಮ್ಮ ಉಮೇದುವಾರಿಕೆಯನ್ನು ತಿರಸ್ಕರಿಸಿದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ಪ್ರತಿನಿಧಿಸುವ ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಸ್ಪೋರ್ಟ್ ಕ್ಲಬ್ 200 ರೂ.ಗಳ ಚಂದಾದಾರಿಕೆ ಬಾಕಿ ಉಳಿಸಿಕೊಂಡಿದೆ ಎಂಬ ಕಾರಣ ನೀಡಿ ಕೆಎಸ್ಸಿಎ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕೆ.ಎನ್. ಶಾಂತಕುಮಾರ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ, ಶಾಂತಕುಮಾರ್ ಅವರ ನಾಮಪತ್ರ ತಿರಸ್ಕರಿಸಿ ಚುನಾವಣಾಧಿಕಾರಿ ನೀಡಿದ್ದ ಹಿಂಬರಹವನ್ನು ರದ್ದುಪಡಿಸಿ ಆದೇಶಿಸಿತ್ತು. ಜೊತೆಗೆ ನಿಗದಿತ ದಿನಾಂಕ (ಡಿಸೆಂಬರ್ 7)ರಂದು ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸಲು ನಿರ್ದೇಶನ ನೀಡಿತ್ತು. ಈ ಆದೇಶ ಪ್ರಶ್ನಿಸಿ ಕಲ್ಪನಾ ವೆಂಕಟಾಚಾರ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಪ್ರತ್ಯೇಕ ಸುದ್ದಿ, ಕೆಎಸ್ಸಿಎ ಚುನಾವಣಾ ಪ್ರಚಾರ: ಕೆಎಸ್ಸಿಎ ಪದಾಧಿಕಾರಿಗಳ ಚುನಾವಣಾ ಪ್ರಚಾರದ ಪ್ರಯುಕ್ತ ಬುಧವಾರ ಶಿವಮೊಗ್ಗಕ್ಕೆ ಆಗಮಿಸಿದ್ದ ಕೆ.ಎನ್. ಶಾಂತಕುಮಾರ್ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಕೆಎಸ್ಸಿಎ ದೊಡ್ಡ ಸಂಸ್ಥೆ. ಇದಕ್ಕೆ ದೀರ್ಘವಾದ, ವೈಭವಯುತ ಇತಿಹಾಸ ಇದೆ. ಕಳೆದ 9 ದಶಕಗಳಲ್ಲಿ ಸಾಕಷ್ಟು ದಿಗ್ಗಜರು ಸೇವೆ ಸಲ್ಲಿಸಿದ್ದಾರೆ. ಈ ಸಂಸ್ಥೆಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಕ್ರೀಡಾಪಟುಗಳಿಗೆ ಮೂಲಭೂತ ಸೌಕರ್ಯ, ತರಬೇತಿ ನೀಡುವ ಎಲ್ಲಾ ಪ್ರಯತ್ನ ಮಾಡಲಾಗುವುದು. ನಮ್ಮ ಟೀಂನಲ್ಲಿ ಹಲವು ಕ್ರೀಡಾಪಟುಗಳಿದ್ದಾರೆ. ಕಳೆದ ಎರಡು ದಶಕಗಳಿಂದ ನಾನು ಕೂಡ ಕ್ರೀಡೆಗೆ ನನ್ನದೇ ಆದ ಸಣ್ಣ ಕೊಡುಗೆ ನೀಡಿದ್ದೇನೆ. ನಮ್ಮ ಟೀಂಗೆ ಬ್ರಿಜೇಶ್ ಪಟೇಲ್ ಸಾರಥ್ಯ ಇದೆ ಎಂದು ತಿಳಿಸಿದ್ದರು.



