Updated By: Priyalachhi
ಬೆಳಗಾವಿ: ಚಳಿಗಾಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ರಾಜ್ಯ ನಾಯಕರು ಬಂದಿದ್ದೇ ಬಂದಿದ್ದು, ಡಿನ್ನರ್ ಪಾರ್ಟಿಗಳು ನಡೆಯುತ್ತಲೇ ಇವೆ. ಗುರುವಾರ ರಾತ್ರಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಆಯೋಜಿಸಿದ್ದ ಭೋಜನಕೂಟವು ತೀವ್ರ ಕುತೂಹಲ ಕೆರಳಿಸಿದೆ.
ಬೆಳಗಾವಿಯ ಕುವೆಂಪುನಗರದಲ್ಲಿ ಇರುವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಪಾರ್ಟಿ ಕರೆದಿದ್ದರು. ಈ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ, ಜಮೀರ್ ಅಹ್ಮದ್ ಖಾನ್ ಸೇರಿದಂತೆ 25 ಸಚಿವರು, ಶಾಸಕರು ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.
ಸಚಿವ ಸಂಪುಟ ಸಭೆ ಮುಗಿಯುತ್ತಿದ್ದಂತೆ, ಸುವರ್ಣ ವಿಧಾನಸೌಧದಿಂದ ನೇರವಾಗಿ ಊಟಕ್ಕೆ ಸತೀಶ್ ಜಾರಕಿಹೊಳಿ ಅವರ ಮನೆಯತ್ತ ನಾಯಕರು ದೌಡಾಯಿಸಿದರು. ಸಿದ್ದರಾಮಯ್ಯ ಜೊತೆಗೆ ಡಾ.ಹೆಚ್.ಸಿ.ಮಹದೇವಪ್ಪ, ಜಮೀರ್ ಅಹಮ್ಮದ್ ಖಾನ್, ಡಾ.ಎಂ.ಸಿ.ಸುಧಾಕರ್ ಆಗಮಿಸಿದರು. ಈ ವೇಳೆ ಮುಖ್ಯಮಂತ್ರಿಗಳನ್ನು ಸತೀಶ್ ಪುತ್ರ ರಾಹುಲ್ ಜಾರಕಿಹೊಳಿ ಹೂಗುಚ್ಛ ನೀಡಿ ಬರಮಾಡಿಕೊಂಡರು. ಇನ್ನು, ಡಾ.ಜಿ.ಪರಮೇಶ್ವರ್ ಜೊತೆಗೆ ಸತೀಶ್ ಜಾರಕಿಹೊಳಿ ತಮ್ಮ ಮನೆಗೆ ಆಗಮಿಸಿದರು.
ನಾಯಕರು ತರಹೇವಾರಿ ಊಟವನ್ನು ಸವಿದರು. ಸತೀಶ್ ಜಾರಕಿಹೊಳಿ ಕೇವಲ ತಮ್ಮ ಆಪ್ತರನ್ನಷ್ಟೇ ಊಟಕ್ಕೆ ಕರೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಅಹಿಂದ ಶಾಸಕರು, ಸಚಿವರಿಗೆ ಮಾತ್ರ ಆಹ್ವಾನ ನೀಡಿರುವುದು ಇತರ ನಾಯಕರ ನಿದ್ದೆಗೆಡಿಸಿದೆ. ಸಿಎಂ, ಇತರರ ಆಗಮನ ಹಿನ್ನೆಲೆಯಲ್ಲಿ, ಸತೀಶ್ ಜಾರಕಿಹೊಳಿ ಮನೆ ಸುತ್ತಲೂ ಬೀಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.
ಇದಕ್ಕೂ ಮುನ್ನ, ಡಿಸೆಂಬರ್ 10ರಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಫಿರೋಜ್ ಸೇಠ್ ಅವರ ಟಿವಿ ಸೆಂಟರ್ನಲ್ಲಿರುವ ಮನೆಯಲ್ಲಿ ರಾತ್ರಿ ಭೋಜನಕೂಟ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಹೆಚ್.ಸಿ.ಮಹದೇವಪ್ಪ, ಜಮೀರ್ ಅಹಮ್ಮದ್ ಖಾನ್, ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ರಹೀಂ ಖಾನ್, ಕೆ.ಜೆ.ಜಾರ್ಜ್, ಶಾಸಕರಾದ ಖನೀಜ್ ಫಾತಿಮಾ, ಸಲೀಂ ಅಹಮದ್, ಎನ್.ಎ.ಹ್ಯಾರಿಸ್ ಸೇರಿದಂತೆ ಹಲವು ಅಹಿಂದ ಶಾಸಕರು, ಮುಖಂಡರು ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.



