Updated By: Priyalachhi
ತುಮಕೂರು : ವರ್ಕಿಂಗ್ ಕಮಿಟಿ ಮೀಟಿಂಗ್ ಇವತ್ತು ದೆಹಲಿಯಲ್ಲಿದೆ. ವರ್ಕಿಂಗ್ ಕಮಿಟಿ ಮೀಟಿಂಗ್ಗೆ ಎಲ್ಲಾ ಸಿಎಂಗಳಿಗೆ ಆಹ್ವಾನ ಬಂದಿದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗಿದ್ದಾರೆ. ಅಲ್ಲಿ ಏನ್ ನಡೆಯುತ್ತೆ, ಯಾವ ಉದ್ದೇಶ, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಮಾಜಿ ಸಚಿವ ಕೆ. ಎನ್. ರಾಜಣ್ಣ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅವರು ಹೋಗೋದಿಲ್ಲ, ಅವರಿಗೆ ಆಹ್ವಾನ ಇಲ್ಲ ಎಂಬ ಮಾಹಿತಿ ನನಗೆ ಇತ್ತು. ಸಿದ್ದರಾಮಯ್ಯ ಕೇಂದ್ರ ನಾಯಕರನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ಮಾಡಲು ಅನುಮತಿ ಪಡೆದು ಬರ್ತಾರೆ ಎಂಬ ವಿಶ್ವಾಸ ಇದೆ. ನನಗೆ ಸಚಿವ ಸ್ಥಾನ ಸಿಕ್ಕಿದ್ರೂ ಒಂದೇ, ಸಿಗಲಿಲ್ಲ ಅಂದ್ರೂ ಒಂದೇ’ ಎಂದರು.
‘ವಿರೋಧ ಪಕ್ಷದವರು ಯಾವತ್ತೂ ನಮ್ಮ ಮಾತಿಗೆ ಸಹಮತ ವ್ಯಕ್ತಪಡಿಸಬೇಕು ಎಂಬ ನಿರೀಕ್ಷೆ ಇಲ್ಲ. ನಾವು ಮಾಡುವ ಕೆಲಸವನ್ನು ತಿರುಚಿ ಜನರಿಗೆ ಹೇಳೋದೇ ವಿರೋಧ ಪಕ್ಷದ ಕೆಲಸ. ಬಿಜೆಪಿಯಲ್ಲಿ ಇರುವಂತಹ ಜಗಳ ಕಾಂಗ್ರೆಸ್ನಲ್ಲಿ ಇಲ್ಲವೇ ಇಲ್ಲ. ನಾವು ಫೆವಿಕಲ್ ಹಾಕೊಂಡು ಅಂಟಿಸಿಕೊಂಡಿದಿವಿ ಅಂತ ಬಿಜೆಪಿ, ಜೆಡಿಎಸ್ನವರು ಹೇಳ್ತಿದ್ರು. ಆದರೆ, ಈಗ ದೇವೇಗೌಡರು ಹೇಳಿ ಬಿಟ್ರಲ್ಲ. ನಮಗೆ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹೊಂದಾಣಿಕೆ ಇಲ್ಲ ಅಂತ ಹೇಳಿ ಬಿಟ್ರಲ್ಲ’ ಎಂದು ತಿಳಿಸಿದರು.
‘ಅದು ಏನಿದ್ರು ಎಂಪಿ ಮತ್ತು ಎಂಎಲ್ಎಗಳಿಗೆ ಮಾತ್ರ ಅಂತ ಹೇಳಿದ್ದಾರೆ. ಇವತ್ತು ಇದಕ್ಕೆ ಹೇಳಿದ್ದಾರೆ. ಅದಕ್ಕೂ ಮುಂದೆ ಹೇಳಿದ್ರೆ ಹೇಳಬಹುದೇನೋ ನನಗೆ ಗೊತ್ತಿಲ್ಲ. ಕುಮಾರಸ್ವಾಮಿ ಇರಬಹುದು, ಬಿಜೆಪಿ ಅವರು ಇರಬಹುದು, ಜೆಡಿಎಸ್ ಮುಖಂಡರು ಇರಬಹುದು. ನಮ್ಮದು ಜಂಟಿ ಹೋರಾಟ ಅಂತ ಹತ್ತಾರು ಬಾರಿ ಹೇಳಿದ್ದಾರೆ. ನಮ್ಮ ಜಂಟಿ ಹೋರಾಟ ಯಾವುದೇ ಕಾರಣಕ್ಕೂ ಅಭಾದಿತ ಅಂತ ಹೇಳಿದ್ದಾರೆ. ಅದನ್ನು ನಾವು ನಂಬಿದ್ವಿ. ಆದರೆ, ಇವತ್ತು 2ಕ್ಕೆ ಮಾತ್ರ ಹೊಂದಾಣಿಕೆ ಅಂತ ಹೇಳಿದ್ದಾರೆ’ ಎಂದರು.



