Updated By: Priyalachhi
ಬಾಲಿವುಡ್ ಬ್ಯೂಟಿ ತಾರಾ ಸುತಾರಿಯಾ (Tara Sutaria) ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಎಂಬ ಅದ್ಭುತ ಲೋಕಕ್ಕೆ ಕಾಲಿಟ್ಟಿದ್ದಾರೆ. ಈ ಬಹುನಿರೀಕ್ಷಿತ ಚಿತ್ರದಿಂದ ಹಿಂದಿ ನಟಿ-ಗಾಯಕಿಯ ಮೊದಲ ಪೋಸ್ಟರ್ ಅನಾವರಣಗೊಂಡಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಿನಿಪ್ರಿಯರಲ್ಲಿ ಸಂಚಲನ ಮೂಡಿಸಿದೆ. ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ‘ಟಾಕ್ಸಿಕ್’, ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ನಟಿಮಣಿಯರ ಪೋಸ್ಟರ್ಸ್ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿಯೆಬ್ಬಿಸುತ್ತಿದೆ.
ತಮ್ಮ ಅಫೀಶಿಯಲ್ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ತಾರಾ ಸುತಾರಿಯಾ ಪೋಸ್ಟರ್ ಹಂಚಿಕೊಂಡ ಯಶ್, ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರದಿಂದ ತಾರಾ ಸುತಾರಿಯಾ ಅವರನ್ನು ರೆಬೆಕಾ ಪಾತ್ರದಲ್ಲಿ ಪರಿಚಯಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಪಿಸ್ತೂಲ್ ಹಿಡಿದು ಸಖತ್ ಸ್ಟನ್ನಿಂಗ್ ಲುಕ್ನಲ್ಲಿ ತಾರಾ ಸುತಾರಿಯಾ ಕಾಣಿಸಿಕೊಂಡಿದ್ದಾರೆ.
2023ರ ಜೂನ್ನಲ್ಲಿ ಹೆಂಡತಿ, ಮಕ್ಕಳೊಂದಿಗೆ ಮೈಸೂರಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದ ನಟ ಯಶ್ ಅವರಿಗೆ ಬಾಲಿವುಡ್ಗೆ ಹೋಗುತ್ತೀರಾ? ಎಂದು ಮಾಧ್ಯಮದವರಿಂದ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಯಶ್, ”ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಳ್ಳುತ್ತೇನೆ. ನಾನು ಎಲ್ಲೂ ಹೋಗಲ್ಲ, ಡೋಂಟ್ ವರಿ” ಎಂದು ತಿಳಿಸಿದ್ದರು. ಅದರಂತೆ ಇದೀಗ ತಮ್ಮ ಟಾಕ್ಸಿಕ್ ಚಿತ್ರದಿಂದ ಬಹುಭಾಷಾ ನಟಿಯರ ಪಾತ್ರಗಳನ್ನು ಪರಿಚಯಿಸುತ್ತಿದ್ದಾರೆ. ಈ ಹಿನ್ನೆಲೆ, ‘ಯಶ್ ತಮ್ಮ ಮಾತಿಗೆ ಬದ್ಧ’ ಎಂಬ ಅಭಿಪ್ರಾಯಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.



