Updated By: Priyalachhi
ನವದೆಹಲಿ: ಚೀನಿವಾರು ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನದ ಬೆಲೆ ಹೊಸ ಜೀವಮಾನದ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಫೆಬ್ರವರಿಯಲ್ಲಿ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ 10 ಗ್ರಾಂ ಬಂಗಾರದ ಬೆಲೆ 1,52,260 ರೂ. ತಲುಪಿತು. ಮತ್ತೊಂದೆಡೆ, MCX ಬೆಳ್ಳಿ ಕೂಡ ಪ್ರತಿ ಕೆಜಿಗೆ 3,27,998 ರೂ. ತಲುಪಿ ದಾಖಲೆ ಬರೆಯಿತು.
ಜಾಗತಿಕ ಮಾರುಕಟ್ಟೆಗಳಲ್ಲಿ ಎರಡೂ ಲೋಹಗಳ ಬೆಲೆ ಔನ್ಸ್ಗೆ ಹೊಸ ಗರಿಷ್ಠ ಮಟ್ಟಕ್ಕೆ ಏರಿತು. ಬೆಳ್ಳಿ ಔನ್ಸ್ಗೆ 95.49 ಅಮೆರಿಕನ್ ಡಾಲರ್ಗಳನ್ನು ತಲುಪಿತು. ಇದು ಈ ವರೆಗಿನ ಗರಿಷ್ಠ ಮಟ್ಟವನ್ನು ಸೂಚಿಸುತ್ತದೆ.
ಚಿನ್ನ ಮತ್ತು ಬೆಳ್ಳಿ ಕಂಡು ಕೇಳರಿಯದ ಮಟ್ಟಕ್ಕೆ ಏರಿಕೆ ಕಂಡಿದೆ. ಹೆಚ್ಚಿದ ಜಾಗತಿಕ ಅನಿಶ್ಚಿತತೆ ಮತ್ತು ಸುರಕ್ಷಿತ ಹೂಡಿಕೆಗೆ ಹೆಚ್ಚಾಗಿರುವ ಬೇಡಿಕೆಗಳಿಂದಾಗಿ ಚಿನ್ನ ಹಾಗೂ ಬೆಳ್ಳಿ ಬೆಲೆ ಗಗನ ಮುಖಿಯಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಜಾಗತಿಕ ರಾಜಕೀಯ ಉದ್ವಿಗ್ನತೆಗಳು, ಹೆಚ್ಚುತ್ತಿರುವ ವ್ಯಾಪಾರ – ಯುದ್ಧದ ಭೀತಿ ಮತ್ತು ತೀಕ್ಷ್ಣವಾದ ಕರೆನ್ಸಿ ಚಲನೆಗಳು ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಅಮೂಲ್ಯ ಲೋಹಗಳ ಮೇಲೆ ಹೂಡಿಕೆದಾರರ ಆಸಕ್ತಿಯನ್ನು ಹೆಚ್ಚಿಸಿವೆ.
ಅಂತಾರಾಷ್ಟ್ರೀಯ ಮತ್ತು ಭಾರತೀಯ ವಿನಿಮಯ ಕೇಂದ್ರಗಳಲ್ಲಿ ಬೆಲೆಗಳು ಐತಿಹಾಸಿಕ ಗರಿಷ್ಠ ಮಟ್ಟದಲ್ಲಿರುವುದರಿಂದ, ಅಸ್ಥಿರವಾದ ಸ್ಥೂಲ ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳ ನಡುವೆ ಹೂಡಿಕೆದಾರರು ಹಾಗೂ ಖರೀದಿದಾರರು ಮತ್ತಷ್ಟು ಏರಿಕೆ ಸಾಧ್ಯತೆಗಳಿವೆ ಎಂದು ಅಂದಾಜಿಸುತ್ತಿದ್ದಾರೆ.
ಬೆಳ್ಳಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ: ಪ್ರಸ್ತುತ ವ್ಯಾಪಾರ ಯುದ್ಧ ಮತ್ತು ಜಾಗತಿಕ ಅನಿಶ್ಚಿತತೆಯ ಮಧ್ಯೆ ಚಿನ್ನದ ಬೆಲೆಗಳು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿ (GJC) ಅಧ್ಯಕ್ಷ ರಾಜೇಶ್ ರೋಕ್ಡೆ ETV ಭಾರತ್ಗೆ ತಿಳಿಸಿದ್ದಾರೆ. ಬೆಳ್ಳಿಯ ಕೈಗಾರಿಕಾ ಬಳಕೆ ಗಮನಾರ್ಹವಾಗಿ ಹೆಚ್ಚಿರುವುದರಿಂದ ಅದು ಇನ್ನೂ ಹೆಚ್ಚಿನ ಏರಿಕೆ ಕಾಣುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.
2 ಲಕ್ಷ ರೂ ದಾಟಲಿದೆಯೇ ಚಿನ್ನ? : ಈ ವರ್ಷ ಚಿನ್ನದ ಬೆಲೆ 2 ಲಕ್ಷ ರೂಪಾಯಿಗಳನ್ನು ದಾಟಲಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ 3 ಲಕ್ಷ ರೂ.ಗಳನ್ನು ತಲುಪಬಹುದು ಎಂದು ರೋಕ್ಡೆ ಭವಿಷ್ಯ ನುಡಿದಿದ್ದಾರೆ. ಇವುಗಳನ್ನು ಬಹಳ ಸಂಪ್ರದಾಯವಾದಿ ಅಂದಾಜುಗಳೆಂದು ವಿವರಿಸಿದ ಅವರು, ಬೆಲೆಗಳು ಈ ಮಟ್ಟವನ್ನು ಮೀರಿ ಮುಂದೆ ಸಾಗಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ. ಹೂಡಿಕೆ ಉದ್ದೇಶಗಳಿಗಾಗಿ ಚಿನ್ನವನ್ನು ಖರೀದಿಸುವಾಗ ಸಂಭವನೀಯ 10-15 ಪ್ರತಿಶತ ತಿದ್ದುಪಡಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯಬೇಕು ಎಂದು ಖರೀದಿದಾರರಿಗೆ ರೋಕ್ಡೆ ಸಲಹೆ ನೀಡಿದ್ದಾರೆ.
ತಜ್ಞರು ಈ ಬಗ್ಗೆ ಹೇಳುವುದೇನು?: ಇಂದು ಬೆಳ್ಳಿ ಪ್ರತಿ ಕಿಲೋಗೆ 3,27,000 ರೂ.ಗಳನ್ನು ದಾಟಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ವ್ಯಾಪಾರ-ಯುದ್ಧದ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಚಿನ್ನವು 10 ಗ್ರಾಂಗೆ 1,52,500 ರೂ.ಗಳನ್ನು ತಲುಪಿದೆ. ಎರಡೂ ಲೋಹಗಳು ಇತಿಹಾಸದಲ್ಲಿ ಇದುವರೆಗಿನ ಅತ್ಯಧಿಕ ಏರಿಕೆಯನ್ನು ದಾಖಲಿಸಿದೆ ಎಂದು ಖ್ಯಾತ ಸರಕು ಮಾರುಕಟ್ಟೆ ತಜ್ಞ ಅನುಜ್ ಗುಪ್ತಾ ಅವರು ETV ಭಾರತದೊಂದಿಗೆ ಮಾತನಾಡಿ ಹೇಳಿದರು. ಇನ್ನು ಬೆಳ್ಳಿ ಸಹ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಬಹುಶಃ 3,50,000 ರೂ. ಮತ್ತು ಚಿನ್ನವು ಶೀಘ್ರದಲ್ಲೇ 1,65,000 ರೂ. ಮಟ್ಟವನ್ನು ಮುಟ್ಟುವ ಸಾಧ್ಯತೆಯಿದೆ ಎಂದು ಖ್ಯಾತ ಸರಕು ಮಾರುಕಟ್ಟೆ ತಜ್ಞ ಅನುಜ್ ಗುಪ್ತಾ ಭವಿಷ್ಯ ನುಡಿದಿದ್ದಾರೆ.



