ಚಿರತೆ ದಾಳಿ ಪ್ರಕರಣ ಭಕ್ತರು ಪಾದಯಾತ್ರೆ ಮಾಡುವ ವೇಳೆ ಡ್ರೋಣ್ ಕ್ಯಾಮೆರಾ ಅಳವಡಿಸಿ: ಸಚಿವ ಖಂಡ್ರೆ ಸೂಚನೆ

0
22

Updated By: Priyalachhi

ಚಾಮರಾಜನಗರ: ಚಿರತೆ ದಾಳಿಯಿಂದ ಪಾದಯಾತ್ರಿ ಮೃತಪಟ್ಟ ಘಟನೆಯಿಂದ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ತಾಳುಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರು ಪಾದಯಾತ್ರೆ ತೆರಳುವಾಗ ಡ್ರೋಣ್ ಕಣ್ಗಾವಲು ಇಡುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಅವರು, ಪ್ರತಿವರ್ಷ ಶಿವರಾತ್ರಿ, ಯುಗಾದಿ ಮತ್ತು ದೀಪಾವಳಿಯ ಸಂದರ್ಭದಲ್ಲಿ ಮಾದಪ್ಪನ ಭಕ್ತರು ಅರಣ್ಯಮಾರ್ಗವಾಗಿ ಪಾದಯಾತ್ರೆಯಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಬರುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಭಕ್ತರು ಕಾಲುದಾರಿಯಲ್ಲಿ ಮೆಟ್ಟಿಲೇರಿ ಬರುವ ಮಾರ್ಗದಲ್ಲಿ ಡ್ರೋನ್ ಕ್ಯಾಮರಾ ಅಳವಡಿಸಿ, ಸತತ ನಿಗಾ ಇಡುವಂತೆ ಸೂಚನೆ ನೀಡಿದರು.

ಕಾಲುದಾರಿ, ಮೆಟ್ಟಿಲು ಇರುವ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ, ಹೋಂ ಗಾರ್ಡ್ಸ್ ಮತ್ತು ಸ್ಥಳೀಯ ಸಿಬ್ಬಂದಿಯ ತಂಡ ರಚಿಸಿ ಭಕ್ತರಿಗೆ ನೆರವಾಗುವ ಅಗತ್ಯವಿದೆ. ಇದಕ್ಕೆ ತಗಲುವ ವೆಚ್ಚವನ್ನು ಭರಿಸುವಂತೆ ಮಲೆಮಹದೇಶ್ವರಸ್ವಾಮಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತಕ್ಕೆ ಪತ್ರ ಬರೆಯುವಂತೆಯೂ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಕಾವೇರಿ ನದಿ ದಾಟಿ, ಹನೂರು ತಾಲೂಕಿನ ಬಸವನಕಣಕ್ಕೆ ಬಂದು ಅಲ್ಲಿಂದ ಕಾಡಿನಲ್ಲಿಯೇ ನಡೆದುಕೊಂಡು ಶಾಗ್ಯ, ಡಿಎಂ ಸಮುದ್ರ, ಎಲ್ಲೆಮಾಳ, ಮಲ್ಲಯ್ಯನಪುರ, ಕೌದಳ್ಳಿ, ವಡಕೆಹಳ್ಳ, ಕೋಣನಕೆರೆ, ತಾಳುಬೆಟ್ಟ ಮಾರ್ಗವಾಗಿ ಬೆಟ್ಟಕ್ಕೆ ಬರುತ್ತಾರೆ. ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಪಾದಯಾತ್ರೆ ಅಪಾಯಕಾರಿಯಾಗಿದೆ. ಹೀಗಾಗಿ, ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಅವರ ಮನವೊಲಿಸಲು ಸಚಿವರು ತಿಳಿಸಿದರು.

ರಾತ್ರಿಯ ವೇಳೆ ಕಾಡಿನ ಅಂಚಿನಲ್ಲಿ, ಕಾಡಿನೊಳಗಿರುವ ವಸತಿ ಪ್ರದೇಶದಲ್ಲಿ ಮಲಗುವುದೂ ಅಪಾಯಕಾರಿಯಾಗಿದೆ. ಕಳೆದ ಬುಧವಾರ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಎಂಬುವರು ಚಿರತೆ ದಾಳಿಯಿಂದ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಹೀಗಾಗಿ ಬಸ್, ಕಾರುಗಳಲ್ಲಿ ತೆರಳಿ ಮಾದಪ್ಪನ ದರ್ಶನ ಪಡೆಯುವಂತೆ ಭಕ್ತರ ಮನವೊಲಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಒಳಗೊಂಡ ತಂಡ ರಚಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಯವರಿಗೆ ಟಿಪ್ಪಣಿ ಕಳಿಸಿರುವುದಾಗಿ ಈಶ್ವರ ಖಂಡ್ರೆ ಹೇಳಿದರು.

sambrama prabha editor suresh kt

LEAVE A REPLY

Please enter your comment!
Please enter your name here