Updated By: Priyalachhi
ಶಿವಮೊಗ್ಗ: ನಗರದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ನಾನ್ ಎಸಿ ಸ್ಲೀಪರ್ ಬಸ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಸೂಡೂರು ಗ್ರಾಮದ ಬಳಿ ನಡೆದಿದೆ. ಈ ದೃಶ್ಯ ಭಯಾನಕವಾಗಿದೆ.
ಹೊಸನಗರ ತಾಲೂಕು ಅರಸಾಳು ಬಳಿಯ 9ನೇ ಮೈಲಿಗಲ್ಲಿನ ಬಳಿ ಬಸ್ಗೆ ಆಕಸ್ಮಿಕ ಬೆಂಕಿ ತಗುಲಿದೆ. ಈ ವೇಳೆ ಬಸ್ನಲ್ಲಿ ಸುಮಾರು 36 ಜನ ಪ್ರಯಾಣಿಕರಿದ್ದರು. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇದರಲ್ಲಿ 12 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ರಿಪ್ಪನ್ಪೇಟೆಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ. ಸ್ಥಳಕ್ಕೆ ರಿಪ್ಪನ್ಪೇಟೆ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಅನ್ನಪೂರ್ಣ ಹೆಸರಿನ ಖಾಸಗಿ ಬಸ್ ಹೊಸನಗರ ತಾಲೂಕು ನಗರದಿಂದ ಬೆಂಗಳೂರಿಗೆ ಬಸ್ ಪ್ರಯಾಣ ಬೆಳೆಸಿದೆ. ಬಸ್ ನಗರ, ಹೊಸನಗರ ಹಾಗೂ ರಿಪ್ಪನ್ಪೇಟೆಯಲ್ಲಿ ಪ್ರಯಾಣಿಕರನ್ನು ಪಿಕ್ ಅಪ್ ಮಾಡಿಕೊಂಡು ಅರಸಾಳು ಗ್ರಾಮವನ್ನು ದಾಟಿ 9ನೇ ಮೈಲಿಗಲ್ಲು ಬಳಿ ಬರುತ್ತಿದ್ದಂತೆ ಬಸ್ನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಬಸ್ಗೆ ಬೆಂಕಿ ತಗುಲಿದೆ. ಇದರಿಂದ ಗಾಬರಿಯಾದ ಬಸ್ ಚಾಲಕ ಬಸ್ ಅನ್ನು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಬಸ್ ನಿಲ್ಲಿಸಿದ್ದಾರೆ. ಬಸ್ ಪ್ರಯಾಣ ಆರಂಭಿಸಿ ಕೇವಲ 30 ನಿಮಿಷವಾಗಿದೆ. ಅಲ್ಲದೆ ಪ್ರಯಾಣಿಕರು ಇನ್ನೂ ನಿದ್ದೆ ಮಾಡದ ಕಾರಣ ಬಸ್ಗೆ ಬೆಂಕಿ ಬೀಳುತ್ತಿದ್ದಂತೆ ಬಸ್ನಿಂದ ಎಲ್ಲರೂ ಇಳಿದು ಬಚಾವ್ ಆಗಿದ್ದಾರೆ.
ಸಮಯ ಪ್ರಜ್ಞೆ ಮೆರೆದ ಬಸ್ ಚಾಲಕ: ಒಂದು ವೇಳೆ ಬಸ್ ಮರಕ್ಕೆ ಡಿಕ್ಕಿ ಹೊಡೆಯದೆ ಮುಂದಕ್ಕೆ ಸಾಗಿದ್ದರೆ ಸಾಕಷ್ಟು ಅನಾಹುತ ಸಂಭಿಸುವ ಸಾಧ್ಯತೆ ಇತ್ತು. ಅಲ್ಲದೆ, ಬಸ್ ಹೊರಟು ಹೆಚ್ಚಿನ ಸಮಯ ಸಹ ಆಗಿರದ ಕಾರಣ ಬಸ್ಗೆ ಹೇಗೆ ಬೆಂಕಿ ಬಿದ್ದಿದೆ ಅನ್ನೋದರ ಬಗ್ಗೆ ತಿಳಿದುಬಂದಿಲ್ಲ. ಬಸ್ ಚಾಲಕನ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.



