Updated By: Priyalachhi
ಬೆಂಗಳೂರು: ಸದನದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿಯ ನರೇಗಾ ಮೇಲಿನ ಚರ್ಚೆ ವೇಳೆ ಪ್ರತಿಯೊಬ್ಬ ಶಾಸಕರೂ ಅರ್ಥಪೂರ್ಣವಾಗಿ ಪಾಲ್ಗೊಂಡು, ವಿಷಯ ಮಂಡನೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು.
ಎರಡು ದಿನ ಸದನ ವಿಸ್ತರಣೆಗೆ ಸಿಎಂ ಒಲವು: ಸಭೆಯಲ್ಲಿ ನರೇಗಾ ಬಗ್ಗೆ ವಿವರಣೆ ನೀಡಿದ ಸಿಎಂ ಸಿದ್ದರಾಮಯ್ಯ, ಎರಡು ದಿನಗಳ ಕಾಲ ಸದನ ವಿಸ್ತರಣೆಗೆ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ನರೇಗಾ ವಿಷಯಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ. ಆದರೆ ನರೇಗಾ ಚರ್ಚೆಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಸೋಮವಾರ, ಮಂಗಳವಾರ ನರೇಗಾ ಚರ್ಚೆಗಾಗಿಯೇ ಅಧಿವೇಶನ ವಿಸ್ತರಿಸೋಣ. ಬಿಎಸಿ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ನಿರ್ಣಯಿಸುತ್ತೇವೆ. ಅಧಿವೇಶನ ವಿಸ್ತರಣೆಯಾದರೆ ಕಡ್ಡಾಯವಾಗಿ ಭಾಗಿಯಾಗಬೇಕು ಎಂದು ಶಾಸಕರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಸಚಿವರು ರಾಜೀನಾಮೆ ನೀಡುವ ಅಗತ್ಯ ಇಲ್ಲ. ಯಾರೋ ಅಧಿಕಾರಿ ಹೇಳಿದ್ದಾರೆ. ಹಾಗಾಗಿ ಆರೋಪ ಹೊರಿಸಿ ರಾಜೀನಾಮೆ ಕೇಳುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ದನಕ್ಕೆ ಗೈರಾಗುವ ಸಚಿವರ ಬಗ್ಗೆ ಸಿಎಂ ಬೇಸರ: ಇದೇ ವೇಳೆ, ಸದನಕ್ಕೆ ಸಚಿವರು ಗೈರಾಗುವುದಕ್ಕೆ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ನಮ್ಮ ಮಂತ್ರಿಗಳೇ ಇರುವುದಿಲ್ಲ. ಮಂತ್ರಿಗಳು ತಪ್ಪದೇ ಹಾಜರಾಗಬೇಕು. ಸಚಿವರಿಲ್ಲ ಎಂದು ಪ್ರತಿಪಕ್ಷದವರು ಗಲಾಟೆ ಮಾಡುತ್ತಾರೆ. ಇದು ಆಗದಂತೆ ನೋಡಿಕೊಳ್ಳಬೇಕು. ಅಧಿವೇಶನ ನಡೆಯುವಾಗ ಸಚಿವರು ಅಧಿಕೃತ ಸಭೆಗಳನ್ನು ನಡೆಸಬಾರದೆಂದು ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡದ ಬಗ್ಗೆ ಆಕ್ಷೇಪ: ಸಭೆಯಲ್ಲಿ ಶಾಸಕರುಗಳು ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ಮನವಿ ಪತ್ರ ನೀಡಿ ಹಲವು ತಿಂಗಳುಗಳೇ ಕಳೆದಿವೆ. ಇದೂವರೆಗೂ ನಮ್ಮ ಪತ್ರಗಳಿಗೆ ಮಾನ್ಯತೆಯನ್ನೇ ನೀಡಿಲ್ಲ. ಈಗಾಗಲೇ ಇನ್ಸ್ಪೆಕ್ಟರ್ಗಳ ವರ್ಗಾವಣೆ ಅವಧಿ ಮುಗಿದು ಐದಾರು ತಿಂಗಳೇ ಕಳೆದಿದೆ. ಎರಡು ವರ್ಷಗಳ ಅವಧಿ ಮುಗಿದರೂ ಒಂದೇ ಸ್ಥಳದಲ್ಲಿ ಮುಂದುವರೆದಿದ್ದಾರೆ. ಇದನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿ. ವರ್ಗಾವಣೆಯನ್ನು ಎರಡು ವರ್ಷಗಳ ಬದಲಿಗೆ ಒಂದು ವರ್ಷಕ್ಕೆ ಸೀಮಿತಗೊಳಿಸಿ ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.



