Updated By: Priyalachhi
ಬೆಂಗಳೂರು: ಸಿನಿಮಾಗಳು ಮನರಂಜನೆಗೆ ಮಾತ್ರ ಸೀಮಿತವಾಗದೆ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ವಾಸ್ತವ ಸ್ಥಿತಿಯನ್ನು ತೋರಿಸುವ ಕೆಲಸ ಮಾಡಬೇಕು. ಕನ್ನಡದ ಮಟ್ಟಿಗೆ ಡಾ.ರಾಜಕುಮಾರ್ ಸಿನಿಮಾಗಳಲ್ಲಿ ಇವೆಲ್ಲವನ್ನೂ ನೋಡುವುದಕ್ಕೆ ಸಾಧ್ಯವಿತ್ತು. ಅಸಮಾನತೆ, ಬಡತನ, ಸಿರಿತನ, ದಲಿತರು, ಹಿಂದುಳಿದವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾಾತರು, ಮಹಿಳೆಯರು ಕುರಿತಾಗಿ ಚಿತ್ರಗಳನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಗರದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಗುರುವಾರ ಹಮ್ಮಿಕೊಳ್ಳಲಾದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರೋತ್ಸವಗಳಿಂದ ಬೇರೆ ದೇಶಗಳ ಜನರ ಜೀವನ, ರಾಜಕೀಯ ಮತ್ತು ಸಮಾಜದ ಬಗ್ಗೆ ಅರ್ಥವಾಗುತ್ತದೆ. ಅಸಮಾನತೆ, ಸಮಾನತೆ ಅರ್ಥ ಮಾಡಿಕೊಳ್ಳುವುದು ಅವಶ್ಯಕ. ಅದಕ್ಕೆ ಚಿತ್ರೋತ್ಸವ ಸುವರ್ಣಾವಕಾಶ ಒದಗಿಸುತ್ತದೆ. ಅದನ್ನು ಉಪಯುಕ್ತವಾಗಿ ಬಳಸಿಕೊಂಡು, ಸಮಾಜದಲ್ಲಿ ಬದಲಾವಣೆ ತರಬೇಕು. ಅದು ಆಗದಿದ್ದರೆ, ಸಿನಿಮಾ ಬರೀ ಮನರಂಜನೆಗೆ ಸೀಮಿತವಾಗುತ್ತದೆ ಎಂದರು.
ನಾವು ಮನುಷ್ಯರು, ಮಾನವರಾಗಿ ಬಾಳುವುದು ಅವಶ್ಯಕ. ಪ್ರತಿ ವ್ಯಕ್ತಿಯನ್ನು ಪ್ರೀತಿ, ಸ್ನೇಹದಿಂದ ಕಾಣಬೇಕು. ಆಗ ಮಾತ್ರ ಸಮಸಮಾಜ ಕಟ್ಟುವುದಕ್ಕೆ ಸಾಧ್ಯ. ಬೇಧ, ಭಾವ, ಅಸಮಾನತೆ ಹೋಗಲಾಡಿಸುವ ಕೆಲಸವನ್ನು ಸಿನಿಮಾದ ಮೂಲಕ ಮಾಡಬೇಕು. ನಮ್ಮ ಸರ್ಕಾರ ಚಲನಚಿತ್ರ ಅಭಿವೃದ್ಧಿಗೆ ಸಹಕಾರ, ಬೆಂಬಲ ಕೊಡುತ್ತದೆ. ಬದುಕನ್ನು ಹಸನು ಮಾಡುವ ಕೆಲಸವನ್ನು ಚಲನಚಿತ್ರಗಳು ಮಾಡಲಿ ಎಂದು ಚಿತ್ರೋತ್ಸವಕ್ಕೆ ಶುಭ ಹಾರೈಸಿದರು.
ಫೆಬ್ರವರಿ 6ರ ವರೆಗೆ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಸುಮಾರು 70 ದೇಶಗಳ ಆಯ್ದ ಸುಮಾರು 240 ಸಿನಿಮಾ ಪ್ರದರ್ಶನ ನಡೆಯಲಿದೆ. ದೇಶ-ವಿದೇಶಗಳ ಅಪರೂಪದ ಈ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶವಿದೆ. ಜಗತ್ತಿನ ಪ್ರಸಿದ್ಧ ಜನಮನ್ನಣೆಗಳಿಸುರುವ 100ಕ್ಕೂ ಹೆಚ್ಚು ವಿದೇಶಿ ಚಲನಚಿತ್ರಗಳು ಹಾಗೂ 30ಕ್ಕೂ ಹೆಚ್ಚು ವಿವಿಧ ಭಾರತೀಯ ಭಾಷೆಗಳ ಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.




