Updated By: Priyalachhi
ಬಾರಾಮತಿ (ಮಹಾರಾಷ್ಟ್ರ): ಎನ್‌ಸಿಪಿಯ ಎರಡು ಬಣಗಳ ವಿಲೀನ ಪ್ರಕ್ರಿಯೆ ಈಗಾಗಲೇ ಆರಂಭವಾಗಿತ್ತು. ಈ ಬಗ್ಗೆ ಫೆಬ್ರವರಿ 12ರಂದು ಅಧಿಕೃತ ಘೋಷಣೆ ಹೊರಬೀಳಲಿತ್ತು. ಅಷ್ಟರೊಳಗೆ ಡಿಸಿಎಂ ಅಜಿತ್ ಪವಾರ್ ಅವರು ಹಠಾತ್ ನಿಧನರಾದರು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಅಜಿತ್ ನಿಧನರಾಗುವ ಮೊದಲು ಎರಡೂ ಬಣಗಳನ್ನು ಒಗ್ಗೂಡಿಸಲು ಬಯಸಿದ್ದರು. ತಮ್ಮ ಬಣದ ನಾಯಕ ಜಯಂತ್ ಪಾಟೀಲ್ ಕಳೆದ ನಾಲ್ಕು ತಿಂಗಳಿಂದ ಅಜಿತ್ ಅವರೊಂದಿಗೆ ಬಣಗಳ ವಿಲೀನ ಕುರಿತು ಮಾತುಕತೆ ನಡೆಸುತ್ತಿದ್ದರು ಎಂದು ಇಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜಕೀಯ ಮತ್ತು ರಾಜ್ಯದ ಹಿತಾಸಕ್ತಿಗಾಗಿ ಪಕ್ಷದ ಎರಡೂ ಬಣಗಳು ಒಟ್ಟಾಗಬೇಕಾದ ಅಗತ್ಯವನ್ನು ಅಜಿತ್ ಮನಗಂಡಿದ್ದರು. ನಮ್ಮ ಆಶಯವೂ ಅದೇ ಆಗಿತ್ತು. ವಿಲೀನದ ನಿರ್ಧಾರವನ್ನು ಫೆಬ್ರವರಿ 12 ರಂದು ಘೋಷಿಸಬೇಕಿತ್ತು. ಅಜಿತ್ ಅವರೇ ಈ ದಿನಾಂಕವನ್ನು ನಿಗದಿ ಮಾಡಿದ್ದರು. ಆದರೆ ದುರದೃಷ್ಟವಶಾತ್ ಅಪಘಾತದಲ್ಲಿ ಅವರನ್ನು ನಾವು ಕಳೆದುಕೊಂಡೆವು” ಎಂದು ಅವರು ಹೇಳಿದರು.
ಸುನೇತ್ರಾ ಡಿಸಿಎಂ ಆಗುವ ಬಗ್ಗೆ ತಿಳಿದಿಲ್ಲ: ಅಜಿತ್ ಪತ್ನಿ ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕುರಿತ ಪ್ರಶ್ನೆಗೆ ಉತ್ತರಿಸಿರುವ ಶರದ್ ಪವಾರ್, ಈ ಬೆಳವಣಿಗೆಯ ಬಗ್ಗೆ ತಮಗೆ ಗೊತ್ತಿಲ್ಲ. ಮಾಧ್ಯಮಗಳ ಮೂಲಕ ಮಾಹಿತಿ ಪಡೆದಿದ್ದೇನೆ. ಇಂದು ಪ್ರಮಾಣವಚನ ನಿಗದಿಯಾಗಿದೆ ಎಂದು ನನಗೆ ತಿಳಿದಿರಲಿಲ್ಲ. ನನ್ನೊಂದಿಗೆ ಯಾರೂ ಈ ಕುರಿತು ಚರ್ಚೆ ನಡೆಸಿಲ್ಲ” ಎಂದು ತಿಳಿಸಿದರು.



