ಕರ್ನಾಟಕದ ತೆರಿಗೆ ಪಾಲು ಕನಿಷ್ಟ ಶೇ.4.7 ಮರು ನಿಗದಿಯಾಗಲಿ: ಸಿಎಂ

0
10

Updated By: Priyalachhi

ಬೆಂಗಳೂರು: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯಯುತ ತೆರಿಗೆ ಪಾಲು, ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಹಾಗೂ ವಿಶೇಷ ಅನುದಾನ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು 16ನೇ ಹಣಕಾಸು ಆಯೋಗದ ಮುಂದೆ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದು, ಈ ಕುರಿತು ‘ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ’ ಎಂಬ ಹೆಸರಿನಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸರಣಿಯಾಗಿ ಪೋಸ್ಟ್ ಹಂಚಿಕೊಂಡಿರುವ ಅವರು, ಹಲವು ಬೇಡಿಕೆಗಳನ್ನು ಮಂಡಿಸಿದ್ದಾರೆ.

ಕರ್ನಾಟಕದ ಆರ್ಥಿಕ ಸ್ಥಿತಿಯನ್ನು ನೋಡಿದರೆ, 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ವರದಿಯಿಂದಾಗಿ ಶೇ 23ರಷ್ಟು ತೆರಿಗೆ ಪಾಲು ನೇರವಾಗಿ ಕಡಿಮೆಯಾಯಿತು. ಕೆಲವು ಆರ್ಥಿಕ ಅಜ್ಞಾನಿಗಳು ಈ ಸಂಗತಿಯನ್ನು ಅರ್ಥ ಮಾಡಿಕೊಳ್ಳದೆ ವಿತಂಡವಾದ ಮಾಡುತ್ತಾರೆ.

14ನೇ ಹಣಕಾಸು ಆಯೋಗವು ಶೇ 4.71ರಷ್ಟು ಪಾಲನ್ನು ನಮಗೆ ಒದಗಿಸಿತ್ತು. 15ನೇ ಹಣಕಾಸು ಆಯೋಗವು ಇದನ್ನು ಶೇ 3.64ಕ್ಕೆ ಇಳಿಸುವ ಮೂಲಕ ಘೋರ ಅನ್ಯಾಯ ಮಾಡಿತು. ಉದಾಹರಣೆಗೆ, ರಾಜ್ಯಗಳಿಗೆ ಹಂಚಿಕೆ ಮಾಡುವ 100 ರೂಪಾಯಿಯಲ್ಲಿ ಮೊದಲು ಕರ್ನಾಟಕಕ್ಕೆ ರೂ.4.71 ಸಿಗುತ್ತಿದ್ದರೆ, 15ನೇ ಆಯೋಗವು ಅದನ್ನು ರೂ.3.64ಗೆ ಇಳಿಸಿತು. ಇದರಿಂದ ರಾಜ್ಯಕ್ಕೆ ನೇರವಾಗಿ ಸುಮಾರು ರೂ.80 ಸಾವಿರ ಕೋಟಿಯಷ್ಟು ಬೃಹತ್ ಪ್ರಮಾಣದ ತೆರಿಗೆ ಪಾಲು ಸಿಗದೆ ಅನ್ಯಾಯವಾಯಿತು.

ದೇಶದ ಆರ್ಥಿಕ ಶಕ್ತಿಯಲ್ಲಿ ಚಾಲಕ ಸ್ಥಾನದಲ್ಲಿರುವ ಕರ್ನಾಟಕ ತಲಾವಾರು ಆರ್ಥಿಕ ಉತ್ಪಾದಕತೆಯಲ್ಲಿ ಮೊದಲ ಸ್ಥಾನದಲ್ಲಿದೆ. ತೆರಿಗೆ, ಸೆಸ್‌ ಮುಂತಾದ ರೂಪದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದಿಂದ ರೂ.4.5 ಲಕ್ಷ ಕೋಟಿಯಿಂದ ರೂ.5 ಲಕ್ಷ ಕೋಟಿಗಳಷ್ಟು ಸಂಗ್ರಹಿಸುತ್ತದೆ. ರಾಜ್ಯದ ಒಟ್ಟಾರೆ ಆಯವ್ಯಯದಲ್ಲಿ ಇಡೀ ದೇಶದಲ್ಲಿಯೇ ಕೇಂದ್ರದಿಂದ ಅತ್ಯಂತ ಕಡಿಮೆ ತೆರಿಗೆ ಪಾಲು ಮತ್ತು ಅನುದಾನ ಪಡೆಯುವ ರಾಜ್ಯವೂ ಕರ್ನಾಟಕವೇ ಆಗಿರುವುದು ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ನಮಗೆ 14ನೇ ಹಣಕಾಸು ಆಯೋಗವು ನೀಡಿದ್ದ ಶೇ 4.71ರಷ್ಟು ಪಾಲನ್ನು ಕೊಟ್ಟರೆ ಮಾತ್ರ ನಾವು ನಿಟ್ಟುಸಿರು ಬಿಡುವಂತಾಗುತ್ತದೆ. ಅದಕ್ಕಿಂತ ಹೆಚ್ಚು ಕೊಟ್ಟರೆ ಮಾತ್ರ ನೈಜವಾಗಿ ನ್ಯಾಯ ಸಿಕ್ಕಂತಾಗುತ್ತದೆ ಎಂದು ಹೇಳಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here