Updated By: Priyalachhi
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಇಂದು ಮಂಡಿಸಿದರು. ಈ ಬಾರಿಯ ಆಯವ್ಯಯದಂತೆ ಕೇಂದ್ರ ಸರ್ಕಾರಕ್ಕೆ ಯಾವ ಮೂಲದಿಂದ ಆದಾಯ ಬರುತ್ತದೆ ಮತ್ತು ಹೇಗೆ ಖರ್ಚಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಯಾವ ಮೂಲದಿಂದ ಸರ್ಕಾರಕ್ಕೆ ಆದಾಯ?: ಸರ್ಕಾರದ ಖಜಾನೆಗೆ ಬರುವ ಪ್ರತಿ ರೂಪಾಯಿಯಲ್ಲಿ 64 ಪೈಸೆಯು ನೇರ ಮತ್ತು ಪರೋಕ್ಷ ತೆರಿಗೆಗಳಿಂದಲೇ ಬರುತ್ತದೆ ಎಂದು ಕೇಂದ್ರ ಬಜೆಟ್ 2026-27 ದಾಖಲೆಗಳು ತಿಳಿಸಿವೆ. ಇದೇ ಸರ್ಕಾರಕ್ಕೆ ಬಹುದೊಡ್ಡ ಆದಾಯದ ಮೂಲವಾಗಿದೆ.

ಸರ್ಕಾರ ನೀಡಿದ ಸಾಲಗಳಿಗೆ ಬರುವ ಬಡ್ಡಿಯಿಂದ ಸುಮಾರು 24 ಪೈಸೆ, ಹೂಡಿಕೆಯಂತಹ ತೆರಿಗೆಯೇತರ ಆದಾಯದಿಂದ 10 ಪೈಸೆ, ಸಾಲವಲ್ಲದ ಬಂಡವಾಳ ರಶೀದಿಗಳಿಂದ 2 ಪೈಸೆ, ಆದಾಯ ತೆರಿಗೆಯಿಂದ 21 ಪೈಸೆ, ಕಾರ್ಪೊರೇಷನ್ ತೆರಿಗೆಯಿಂದ 18 ಪೈಸೆ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಿಂದ ಪ್ರತಿ ರೂಪಾಯಿಗೆ 15 ಪೈಸೆ ಬರುತ್ತದೆ ಎಂದು ಬಜೆಟ್ ದಾಖಲೆಗಳಲ್ಲಿ ತೋರಿಸಲಾಗಿದೆ.
ಇದಲ್ಲದೆ, ಸರ್ಕಾರವು ಪ್ರತಿ ರೂಪಾಯಿ ಆದಾಯದಲ್ಲಿ ಅಬಕಾರಿ ಸುಂಕದಿಂದ 6 ಪೈಸೆ ಮತ್ತು ಕಸ್ಟಮ್ಸ್ ಸುಂಕದಿಂದ 4 ಪೈಸೆ ಗಳಿಸಲು ಯೋಜಿಸಿದೆ. ಸಾಲ ಮತ್ತು ಇತರ ಹೊಣೆಗಾರಿಕೆಗಳಿಂದ ಪ್ರತಿ ರೂಪಾಯಿಗೆ 24 ಪೈಸೆ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಸಂಸತ್ತಿನಲ್ಲಿ ಮಂಡಿಸಿದ 2026-27ರ ಕೇಂದ್ರ ಬಜೆಟ್ನಲ್ಲಿ ತಿಳಿಸಲಾಗಿದೆ.
ಯಾವುದಕ್ಕೆಲ್ಲಾ ಎಷ್ಟು ಖರ್ಚು? 2026ರ ಬಜೆಟ್ನಲ್ಲಿ ಅತಿ ದೊಡ್ಡ ಪಾಲು ರಾಜ್ಯಗಳಿಗೆ ಹಂಚಿಕೆಯಾಗಿದೆ. ಸರ್ಕಾರಕ್ಕೆ ಬರುವ 1 ರೂಪಾಯಿ ಆದಾಯದಲ್ಲಿ ಅದನ್ನು ವಿವಿಧ ಕ್ಷೇತ್ರಗಳಿಗೆ ವ್ಯಯ ಮಾಡಲಾಗುತ್ತದೆ. ಅದರಲ್ಲಿ ಸರ್ಕಾರ ಪಡೆದ ಸಾಲಕ್ಕೆ ಬಡ್ಡಿ ಪಾವತಿ, ರಾಜ್ಯಗಳ ತೆರಿಗೆ ಮತ್ತು ಸುಂಕಗಳ ಪಾಲು ಸೇರಿ ಕ್ರಮವಾಗಿ ಪ್ರತಿ ರೂಪಾಯಿಗೆ 20 ಪೈಸೆ ಮತ್ತು 22 ಪೈಸೆ ಖರ್ಚಾಗಲಿದೆ.



