ನಮ್ಮ ಮೆಟ್ರೋ ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ: ಸಿಎಂ

0
6

Updated By: Priyalachhi

ಬೆಂಗಳೂರು: ನಮ್ಮ ಮೆಟ್ರೋ ರೈಲು ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ, ದರ ನಿಗದಿ ಸಮಿತಿ ಶಿಫಾರಸು ಮಾಡಿರುವ ದರಗಳನ್ನು ಮರುಪರಿಶೀಲಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಇಂದು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ನಮ್ಮ ಮೆಟ್ರೋ ನಮ್ಮ ನಗರದ ಪ್ರಗತಿಯ ಸಂಕೇತ ಮತ್ತು ಲಕ್ಷಾಂತರ ದುಡಿಯುವ ಜನರು, ವಿದ್ಯಾರ್ಥಿಗಳು ಮತ್ತು ಕುಟುಂಬಗಳ ದೈನಂದಿನ ಜೀವನಾಡಿಯಾಗಿದೆ. ಮೆಟ್ರೋ ದರಗಳ ಪರಿಷ್ಕರಣೆಯ ಸಂಬಂಧ ಪ್ರಯಾಣಿಕರು ವ್ಯಕ್ತಪಡಿಸುತ್ತಿರುವ ಕಾಳಜಿ ಮತ್ತು ನೋವನ್ನು ನಾನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ. ಜವಾಬ್ದಾರಿಯುತ ಸರ್ಕಾರ ಜನರ ಮಾತನ್ನು ಆಲಿಸುತ್ತದೆ ಮತ್ತು ನಿಮ್ಮ ಧ್ವನಿ ನಮಗೆ ಮುಖ್ಯ ಎಂಬ ಭರವಸೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ದರ ಪರಿಷ್ಕರಣೆಯಲ್ಲಿ ನಮ್ಮ ನಿಯಂತ್ರಣ ಇಲ್ಲ: ​​ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002ರ ಅಡಿಯಲ್ಲಿ ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧಾರ ಮಾಡುವುದಿಲ್ಲ. ​ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಚಿಸಿದ ಸ್ವತಂತ್ರ ದರ ನಿಗದಿ ಸಮಿತಿ (FFC) ಈ ದರಗಳನ್ನು ನಿರ್ಧರಿಸುತ್ತದೆ. ​ಕಾಯ್ದೆಯ ಸೆಕ್ಷನ್ 36ರ ಪ್ರಕಾರ, ದರ ನಿಗದಿ ಸಮಿತಿಯು ನಿಗದಿತ ಅವಧಿಯೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕು. ​ಸೆಕ್ಷನ್ 37ರ ಅಡಿಯಲ್ಲಿ, ಈ ದರ ನಿಗದಿ ಸಮಿತಿ ಮಾಡಿರುವ ಈ ಶಿಫಾರಸುಗಳ ಅನುಷ್ಠಾನಕ್ಕೆ ಮೆಟ್ರೋ ಆಡಳಿತ ಬದ್ಧವಾಗಿರುತ್ತವೆ. ಹಾಗಾಗಿ ಅವುಗಳನ್ನು ಜಾರಿಗೆ ತರುವುದು ಅನಿವಾರ್ಯ ಎಂದು ವಿವರಿಸಿದ್ದಾರೆ.

​ಸಮಿತಿ ಮಾಡಿದ ಶಿಫಾರಸುಗಳನ್ನು ಕಡೆಗಣಿಸುವುದಾಗಲಿ, ನಿರಾಕರಿಸುವ ಅಧಿಕಾರ ರಾಜ್ಯ ಸರ್ಕಾರ ಅಥವಾ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಇಲ್ಲ. ಮೆಟ್ರೋ ದರ ಪರಿಷ್ಕರಣೆಗೆ ಕರ್ನಾಟಕ ಸರ್ಕಾರವೇ ಕಾರಣ ಎಂದು ಹೇಳುವುದು ವಾಸ್ತವಿಕವಾಗಿ ತಪ್ಪು ಮತ್ತು ದಿಕ್ಕು ತಪ್ಪಿಸುವಂತದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

​ದರ ಮರುಪರಿಶೀಲನೆಗೆ ಮನವಿ: ​ಸಾರ್ವಜನಿಕ ಸಾರಿಗೆಯು ಕೈಗೆಟುಕುವಂತಿರಬೇಕು ಎಂಬುದು ನಮ್ಮ ನಿಲುವು. ಹೀಗಾಗಿ ದರ ನಿಗದಿ ಸಮಿತಿ ಶಿಫಾರಸು ಮಾಡಿರುವ ದರಗಳನ್ನು ಮರುಪರಿಶೀಲಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ​ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಕಡಿಮೆ ಆದಾಯದ ಪ್ರಯಾಣಿಕರ ಹಿತದೃಷ್ಟಿಯಿಂದ ಮೆಟ್ರೋ ದರಗಳನ್ನು ತರ್ಕಬದ್ಧಗೊಳಿಸುವ ಕಾರ್ಯವಿಧಾನಗಳನ್ನು ಕಂಡುಕೊಳ್ಳುವಂತೆ ಕೋರಲಾಗುವುದು ಎಂದು ಭರವಸೆ ನೀಡಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here