ಸರ್ಕಾರಿ ನೌಕರರಿಗೆ ಖಾದಿ ಕಡ್ಡಾಯ ಆದೇಶದಿಂದ ಖಾದಿ ಉದ್ಯಮಕ್ಕೆ ಮರುಜೀವ

0
8

Updated By: Priyalachhi

ಹುಬ್ಬಳ್ಳಿ: ಸರ್ಕಾರಿ ನೌಕರರು ತಿಂಗಳ ಮೊದಲ ಶನಿವಾರ ಖಾದಿ ಉಡುಪು ಧರಿಸಬೇಕೆಂಬ ಸರ್ಕಾರದ ನಿರ್ಣಯ ಖಾದಿ ಮಂಡಳಿ ಹಾಗೂ ಖಾದಿ ಉತ್ಪಾದಕರಲ್ಲಿ ಸಂತಸ ಮೂಡಿಸಿದ್ದು, ಸತತ ಉದ್ಯೋಗದ ಭರವಸೆ ಮೂಡಿಸಿದೆ.

ಕರ್ನಾಟಕದಲ್ಲಿ ಕೆವಿಐಸಿ (ಖಾದಿ ಆ್ಯಂಡ್​​ ವಿಲೇಜ್​​ ಇಂಡಸ್ಟ್ರೀಸ್​ ಕಮಿಷನ್​)ಯಲ್ಲಿ ನೋಂದಣಿ ಮಾಡಿದ 176 ಖಾದಿ ಸಂಸ್ಥೆಗಳಿವೆ. ಖಾದಿ ಕ್ಷೇತ್ರದಲ್ಲಿ ಸುಮಾರು 55 ಸಾವಿರ ಉದ್ಯೋಗಿಗಳಿದ್ದಾರೆ. ಅವರಲ್ಲಿ ಶೇ.90ರಷ್ಟು ಮಹಿಳೆಯರು ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಖಾದಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಈ‌ ನಿರ್ಧಾರದಿಂದ ಖಾದಿ ಬಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆಯನ್ನು ಖಾದಿ ಸಂಘ ಇಟ್ಟುಕೊಂಡಿದ್ದು, ಸರ್ಕಾರ ಶುದ್ದ ಹಾಗೂ ಮಾನ್ಯತೆ ಪಡೆದ ಖಾದಿ ಕೇಂದ್ರಗಳಲ್ಲೇ ಖಾದಿ ಬಟ್ಟೆ ಖರೀದಿಸಲು ನೌಕರರಿಗೆ ಆದೇಶಿಸಬೇಕಿದೆ.

ಸರ್ಕಾರ ಹಾಗೂ ಇತರೆ ಪ್ರಾಧಿಕಾರಗಳಿಗೆ ವಾರದಲ್ಲಿ ಒಂದು ದಿನ ಖಾದಿ ಕಡ್ಡಾಯ ಮಾಡಬೇಕೆಂಬ ಬೇಡಿಕೆಯನ್ನು ಖಾದಿ ಗ್ರಾಮೋದ್ಯೋಗ ಮಂಡಳಿ ಸರ್ಕಾರ ಮುಂದಿಟ್ಟಿತ್ತು. ಆದ್ರೆ, ಈಗ ತಿಂಗಳಲ್ಲಿ ‌ಒಂದು ದಿನ ಖಾದಿ ಕಡ್ಡಾಯ ಮಾಡಿದ್ದು, ಕುಂಟುಂತಾ ಸಾಗುತ್ತಿದ್ದ ಖಾದಿ ಉದ್ಯಮಕ್ಕೆ ಮರುಜೀವ ನೀಡಿದೆ.

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ಈಗಾಗಲೇ 20 ಕೋಟಿ ರೂ. ಮೊತ್ತದ ಖಾದಿ ಬಟ್ಟೆ ದಾಸ್ತಾನಿದೆ. ರಾಜ್ಯದಲ್ಲಿ ಖಾದಿ ಸಂಸ್ಥೆ, ಉಲನ್​ ಸಂಸ್ಥೆ, ರೇಷ್ಮೆ ಸಂಸ್ಥೆಗಳು ಸೇರಿ 176 ಸಂಘ ಸಂಸ್ಥೆಗಳು ಇದರ ಅಡಿಯಲ್ಲಿ ‌ಕೆಲಸ ಮಾಡುತ್ತಿದ್ದು, ಸುಮಾರು 55 ಸಾವಿರ ಜನ ಕೆಲಸ ಮಾಡುತ್ತಿದ್ದು, ಎಲ್ಲೆಡೆ ಖಾದಿ ಬಟ್ಟೆ ಲಭ್ಯವಿದೆ.

ಈಗಾಗಲೇ ಸಾಕಷ್ಟು ಸರ್ಕಾರಿ ನೌಕರರು ಖಾದಿ ಕೇಂದ್ರಗಳಿಗೆ ಭೇಟಿ ನೀಡುವುದರ ಜತೆಗೆ ಖರೀದಿ ಮಾಡುತ್ತಿದ್ದು, ಮಹಿಳೆಯರಿಗೆ ಬೇಕಾದ ಸೀರೆ ಮತ್ತು ಚೂಡಿದಾರ, ಪುರುಷರಿಗೆ ಪ್ಯಾಂಟು ಶರ್ಟ್​ ಮತ್ತು ಓವರ್​ ಕೋಟ್​ ಸೇರಿದಂತೆ ಎಲ್ಲಾ ತರಹದ ಉಡುಪುಗಳು ಲಭ್ಯವಿದೆ. ಬಟ್ಟೆ ಖರೀದಿ ಮಾಡಿ ತಮಗೆ ಇಷ್ಟವಾದಂತೆ ಹೊಲಿಸಿಕೊಳ್ಳಬಹುದು ಅಥವಾ ಇಲ್ಲಿಯೇ ಆರ್ಡರ್ ಕೊಟ್ಟರೆ ಹೊಲಿದು ಕೊಡುವ ವ್ಯವಸ್ಥೆಯನ್ನೂ ಖಾದಿ ಸಂಘಗಳು ಮಾಡಿವೆ.

ಇತ್ತೀಚೆಗೆ ಕೆಲ ವಿಶ್ವವಿದ್ಯಾಲಯಗಳ ಘಟಿಕೋತ್ಸವಗಳಲ್ಲಿ ಖಾದಿ ಜುಬ್ಬಾ, ಪಾಯಿಜಾಮಧಾರಣೆ ಜಾರಿ ಇದೆ. ಕವಿವಿ ಘಟಿಕೋತ್ಸವದಲ್ಲಿ ಕೆಲ ವರ್ಷಗಳಿಂದ ಇದು ನಡೆಯುತ್ತಿದೆ. ಧಾರವಾಡ ಐಐಟಿಯವರು ಪ್ರತಿ ಘಟಿಕೋತ್ಸವಕ್ಕೆ 5-6 ಲಕ್ಷ ರೂ. ವ್ಯಯಿಸಿ ಖಾದಿ ಬಟ್ಟೆ ಖರೀದಿಸುತ್ತಾರೆ. ಹುಬ್ಬಳ್ಳಿ ಕಾನೂನು ವಿವಿ ವಿದ್ಯಾರ್ಥಿಗಳು ವಾರಕ್ಕೆ ಒಂದು ದಿನ ಖಾದಿ ಉಡುಪನ್ನೇ ಧರಿಸುತ್ತಾರೆ. ಅವಳಿ ನಗರದ ಕೆಲ ಕಾಲೇಜುಗಳಲ್ಲಿಯೂ ಕೂಡ ಖಾದಿ ಬಟ್ಟೆ ಧರಿಸಲಾಗುತ್ತಿದೆ. ಗದಗ ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರತಿ ಶುಕ್ರವಾರ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಖಾದಿ ಬಳಸುತ್ತಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here