ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರ ಗಮನಕ್ಕೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಏಪ್ರಿಲ್ 10ರಿಂದ ದೇಶದಾದ್ಯಂತ ಇರುವ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.
ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಟೋಲ್ ವಹಿವಾಟಿನಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.
ಇನ್ನು ಮುಂದೆ ಟೋಲ್ ಶುಲ್ಕವನ್ನು ಕೇವಲ ಫಾಸ್ಟ್‌ಟ್ಯಾಗ್ (FASTag) ಅಥವಾ ಯುಪಿಐ (UPI) ಮೂಲಕ ಮಾತ್ರ ಪಾವತಿಸಲು ಅವಕಾಶವಿರುತ್ತದೆ. ಪ್ರಸ್ತುತ ದೇಶಾದ್ಯಂತ 1,550ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಲ್ಲಿ ಈ ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಜಾರಿಯಾಗಲಿದೆ. ಐಡಿ ಕಾರ್ಡ್‌ಗಳನ್ನು ತೋರಿಸಿ ಉಚಿತವಾಗಿ ಟೋಲ್ ದಾಟುವ ಪದ್ಧತಿಗೂ ಪ್ರಾಧಿಕಾರ ಕಡಿವಾಣ ಹಾಕಲಿದೆ.
ನಿಯಮ ಮೀರಿದರೆ ಭಾರೀ ದಂಡ!
ಹೊಸ ನಿಯಮದ ಪ್ರಕಾರ, ವಾಹನ ಸವಾರರು ನಗದು ರೂಪದಲ್ಲಿ ಶುಲ್ಕ ಪಾವತಿಸಲು ಮುಂದಾದರೆ ದಂಡ ತೆರಬೇಕಾಗುತ್ತದೆ. ವಿಶೇಷವಾಗಿ, ಫಾಸ್ಟ್‌ಟ್ಯಾಗ್ ಇಲ್ಲದೆ ಕೇವಲ ಯುಪಿಐ ಮೂಲಕ ಶುಲ್ಕ ಪಾವತಿಸುವವರು ಸಾಮಾನ್ಯ ಟೋಲ್ ಶುಲ್ಕಕ್ಕಿಂತ 1.25 ಪಟ್ಟು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆ ಬಹುತೇಕ ಕಡ್ಡಾಯವಾದಂತಾಗಿದೆ.
ಇಂಧನ ಉಳಿತಾಯದ ನಿರೀಕ್ಷೆ
ನಗದು ಪಾವತಿಯಿಂದಾಗಿ ಟೋಲ್ ಬೂತ್‌ಗಳಲ್ಲಿ ಚಿಲ್ಲರೆ ನೀಡುವ ಸಮಸ್ಯೆ ಸಾಮಾನ್ಯರ ಪಾಡಾಗಿತ್ತು. ಇದರಿಂದಾಗಿ ವಾಹನಗಳು ಉದ್ದನೆಯ ಸರತಿ ಸಾಲಿನಲ್ಲಿ ಕಾಯಬೇಕಾಗುತ್ತಿತ್ತು. ಡಿಜಿಟಲ್ ಪಾವತಿ ವ್ಯವಸ್ಥೆಯಿಂದಾಗಿ ಈ ವಿಳಂಬ ತಪ್ಪಲಿದ್ದು, ವಾಹನ ಸವಾರರ ಅಮೂಲ್ಯ ಸಮಯ ಮತ್ತು ಇಂಧನ ಉಳಿತಾಯವಾಗಲಿದೆ.



