Updated By: Priyalachhi
ಬೆಂಗಳೂರು: ನಗರದ ಶ್ವಾಸಕೋಶದಂತಿರುವ ಲಾಲ್ಬಾಗ್ಗೆ ಹಾನಿ ಮಾಡಿ ಟನಲ್ ರಸ್ತೆ ಮಾಡುವ ಮೊದಲು ಇರುವ ರಸ್ತೆಗಳ ಗುಂಡಿಗಳನ್ನು ಮುಚ್ಚಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ರಾಜ್ಯ ಸರ್ಕಾರದ ಟನಲ್ ಯೋಜನೆ ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ಇಂದು ಲಾಲ್‌ಬಾಗ್‌ನಲ್ಲಿ ಜನಜಾಗೃತಿ ಅಭಿಯಾನ ನಡೆಸಿದರು. ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಅಶ್ವತ್ಥ ನಾರಾಯಣ ಅವರು ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ, ಸಹಿ ಸಂಗ್ರಹಿಸಿದರು.

ಇದೇ ವೇಳೆ, ಜಿಬಿಎ ಮುಖ್ಯ ಇಂಜಿನಿಯರ್ ಹಾಗೂ ಲಾಲ್‌ಬಾಗ್ ಜಂಟಿ ನಿರ್ದೇಶಕರಿಂದ ಮಾಹಿತಿ ಪಡೆದ ಅಶೋಕ್, ಆರು ಎಕರೆ ಬಳಸಿಕೊಂಡರೆ ಇದು ಮಾರ್ಕೆಟ್ ಆಗುವುದಿಲ್ಲವೇ?. ಮುಂದೆ ನಾವೂ ಇರಲ್ಲ, ನೀವೂ ಇರಲ್ಲ. ಆದ್ರೆ ನಾವು ಮಾಡುವ ಆದೇಶ ಉಳಿದುಕೊಳ್ಳುತ್ತದೆ. ಬೆಂಗಳೂರಿಗೆ ಯಾರು ಬಂದರೂ ಮೊದಲು ನೋಡುವುದೇ ಲಾಲ್‌ಬಾಗ್, ವಿಧಾನಸೌಧ ಎಂದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಶೋಕ್, ಬೆಂಗಳೂರಿನ ಪರಿಸರಪ್ರೇಮಿಗಳ ಇತಿಹಾಸ ಹೊಂದಿರುವ ಸಸ್ಯಕಾಶಿಗೆ ರಾಜ್ಯ ಸರ್ಕಾರ ಗುಂಡಿ ತೋಡುವ ಕೆಲಸ ಮಾಡುತ್ತಿದೆ. ಟನಲ್ ರಸ್ತೆಯ ಯೋಜನೆಯಿಂದ ಬೆಂಗಳೂರಿನ ಪರಿಸರ ಹಾಳಾಗುತ್ತದೆ. ಇದರಿಂದ ಬೆಂಗಳೂರಿನ ಜನ ನಿದ್ದೆಗೆಡುವಂತಾಗಿದೆ. 18 ಕಿ.ಮೀ ಟನಲ್ ರಸ್ತೆ ನಿರ್ಮಾಣವಾದರೆ ಟ್ರಾಫಿಕ್ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಎಂದರೆ ಮಾಡಿ, ನಾವು ಬೆಂಬಲ ಕೊಡುತ್ತೇವೆ ಎಂದು ಹೇಳಿದರು.

ನಗರದಲ್ಲಿ 70% ದ್ವಿಚಕ್ರ ವಾಹನಗಳಿವೆ. ಕೇವಲ 10% ಜನರಿಗಾಗಿ ಟನಲ್ ರಸ್ತೆ ಮಾಡುತ್ತಿದ್ದೀರಿ. ಬೈಕ್, ಸೈಕಲ್‌ಗಳಿಗೆ ಆ ರಸ್ತೆಗೆ ಪ್ರವೇಶವಿಲ್ಲ. ಕೇವಲ ಕಾರುಗಳಿಗೆ ಮಾತ್ರ ಪ್ರವೇಶ ಎನ್ನುತ್ತಿದ್ದೀರಿ. ಆ ಟನಲ್ ರಸ್ತೆಯಲ್ಲಿ ಟ್ರಾವೆಲ್ ಮಾಡಿದರೆ 16-20 ಸಾವಿರ ರೂಪಾಯಿ ತಿಂಗಳಿಗೆ ಖರ್ಚು ಮಾಡಬೇಕು. ಅಷ್ಟು ಖರ್ಚು ಮಾಡಿ ಇಎಂಐ ಕಟ್ಟಿದರೆ ಒಂದು ಬೆಂಜ್ ಕಾರೋ ಮೂರು ಬೆಡ್ ರೂಮ್‌ನ ವಿಲ್ಲಾವನ್ನೋ ಖರೀದಿಸಿಬಿಡಬಹುದು. ಇದು ಟ್ವಿನ್ ಟನಲ್ ರಸ್ತೆಯಲ್ಲ, ವಿಐಪಿ ಕಾರಿಡಾರ್ ಆಗುತ್ತೆ. ಭೂಮಿ ಮೇಲಿರುವ ರಸ್ತೆಗಳನ್ನೇ ಸರಿಯಾಗಿ ಮಾಡದೆ, ಭೂಮಿಯೊಳಗೆ ರಸ್ತೆ ಮಾಡಲು ಹೊರಟಿದ್ದಾರೆ. ಟನಲ್ ರಸ್ತೆ ಯೋಜನೆಗೂ ಮುನ್ನ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿ ಎಂದು ಸಲಹೆ ನೀಡಿದರು.
ಯೋಜನೆಗಾಗಿ 1 ಕಿ.ಮೀಟರಿಗೆ 1,285 ಕೋಟಿ ರೂ ಖರ್ಚಾಗುತ್ತಿದೆ. ಇಸ್ರೋದ ಮಂಗಳಯಾನವೇ ಇದಕ್ಕಿಂತಲೂ ಕಡಿಮೆ ಬಜೆಟ್‌ನಲ್ಲಿ ಆಗಿದೆ. ಈಗ ಈ ದುಬಾರಿ ಯೋಜನೆಗಾಗಿ ಸಾಲ ಮಾಡಲು ಹೊರಟಿದ್ದಾರೆ. ಆ ಸಾಲಕ್ಕೆ ಬಡ್ಡಿ ಎಲ್ಲಿಂದ ಕೊಡುತ್ತೀರಿ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಳ್ಳುವ ಯೋಜನೆಯಿದು. ಸೌಖ್ಯವಾಗಿರಲಿ ಎಂದು ಕೆಂಪೇಗೌಡರು ಶಿಲೆಗಳ ಮೇಲೆ ಬೆಂಗಳೂರು ನಗರ ಕಟ್ಟಿದ್ದಾರೆ, ಇಲ್ಲಿ ಭೂಕಂಪಗಳು ಆಗುವುದಿಲ್ಲ. ಆದರೆ ಈ ಯೋಜನೆಯ ಮೂಲಕ 3 ಸಾವಿರ ದಶಲಕ್ಷ ಶಿಲೆಗಳಿರುವ ಭೂಮಿಯ ಆಳವನ್ನ ಕೊರೆಯಲು ಹೊರಟಿದ್ದೀರಿ. ಲಾಲ್‌ಬಾಗ್‌ನಲ್ಲಿ ಕಾನೂನಿನ ಬಗ್ಗೆ ರಾಜ್ಯ ಸರ್ಕಾರವೇ ಬೋರ್ಡ್ ಹಾಕಿ ತಾನೇ ಕೊಲೆ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಟನಲ್ ರಸ್ತೆಗಾಗಿ ಲಾಲ್‌ಬಾಗ್, ಸ್ಯಾಂಕಿ ಎಲ್ಲೆಡೆ ಇನ್‌ಲೆಟ್, ಔಟ್‌ಲೆಟ್ ಮಾಡುತ್ತಿದ್ದಾರೆ. ಯಾವ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ. ಬೆಂಗಳೂರಿನಲ್ಲಿ 12% ಜನರ ಬಳಿ ಮಾತ್ರ ಕಾರುಗಳಿವೆ. ಟನಲ್ ರಸ್ತೆಯನ್ನು ಶ್ರೀಮಂತರಿಗಾಗಿ ಮಾಡಲಾಗುತ್ತಿದೆ. ಇದು ತೇಜಸ್ವಿ ಸೂರ್ಯ ವಿರೋಧಿಸುತ್ತಿರುವುದಲ್ಲ, ಬೆಂಗಳೂರು ಜನರ ವಿರೋಧ ಇದು. ನಾವು ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಕೋರ್ಟ್ ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳು ಹೇಗೆ ಉತ್ತರ ಕೊಡಲಿದ್ದಾರೋ ನೋಡಬೇಕು ಎಂದರು.
ಅಲ್ಲದೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಬೇರೆ ಯೋಜನೆ ಬಗ್ಗೆ ಮಾತಾಡಿರುವ ವಿಡಿಯೋವನ್ನು ಹಿಂದೆ ಮುಂದೆ ಮಾಡಿ ಅವರೇ ಹೇಳಿದ್ದಾರೆಂದು ಹಬ್ಬಿಸುತ್ತಿದ್ದಾರೆ. ಈ ಯೋಜನೆ ಬಗ್ಗೆ ಗಡ್ಕರಿ ಅವರಿಗೆ ನಾನು ತಿಳಿಸಿದಾಗ ಗಾಬರಿಯಾದರು. ಗಡ್ಕರಿಯವರೇ ಅನುಮತಿ ನೀಡಿದ್ದಾರೆ ಎಂದು ಹೇಳ್ತಿದ್ದೀರಲ್ಲ, ಅವರು ವಿರೋಧಿಸಿದರೆ ಯೋಜನೆ ನಿಲ್ಲಿಸುತ್ತೀರಾ ಎಂದು ಪ್ರಶ್ನಿಸಿದರು.



