ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ ಕಲಬುರಗಿ ಕೊನೆಯ ಸ್ಥಾನ ಪಡೆದಿದೆ.
ಈ ಬಾರಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಕಲಬುರಗಿ ಜಿಲ್ಲೆಗೆ ಕೊನೆಯ ಸ್ಥಾನ ಬಂದಿರುವುದಕ್ಕೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ.
ಸ್ವಂತ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಖರ್ಗೆ ಕುಟುಂಬ ವಿಫಲವಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ವಾಗ್ದಾಳಿ ನಡೆಸಿವೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, “S.S.L.C ಫಲಿತಾಂಶ ಬಂದಿದೆ ಟ್ವೀಟ್ ಮಾಡಿ, ಎಲ್ಲಿದ್ದೀರಿ ಮಹಾಜ್ಞಾನಿ ಪ್ರಿಯಾಂಕ್ ಖರ್ಗೆ ಅವರೇ?” ಎಂದು ಪ್ರಶ್ನಿಸಿದೆ.
SSLC ಫಲಿತಾಂಶದಲ್ಲಿ ಕಲಬುರಗಿ 35 ಅಂದರೆ ಕೊನೆಯ ಸ್ಥಾನ ಪಡೆದಿದ್ದು, ಹಿಂದಿನ ಸಾಲಿನಲ್ಲಿಯೂ 34ನೇ ಸ್ಥಾನದಲ್ಲಿತ್ತು. 4-5 ದಶಕಗಳಿಂದ ಕಲಬುರಗಿ ಜಿಲ್ಲೆ ಆಳುತ್ತಿರುವ ಖರ್ಗೆ ಕುಟುಂಬ ಸ್ವಂತ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸುವಲ್ಲಿ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಜೆಡಿಎಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಕಲಬುರಗಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ, ಶಿಕ್ಷಕರ ನೇಮಕ ಸೇರಿದಂತೆ ಶಿಕ್ಷಣದ ಪ್ರಗತಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ JDS ಆಕ್ರೋಶ ವ್ಯಕ್ತಪಡಿಸಿದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಅವರೇ, ನಿಮ್ಮ ಭಾಷಣದ ‘ಸಾಧನೆ’ಗೆ ಈ ಫಲಿತಾಂಶವನ್ನು ಸೇರಿಸಿಕೊಳ್ಳಿ. ಕಲಬುರಗಿಯನ್ನು ಅಕ್ಷರಶಃ ಶೈಕ್ಷಣಿಕ ಅಂಧಕಾರಕ್ಕೆ ದೂಡಿದ್ದೀರಿ. ಮಾತಿನಲ್ಲಿ ತೋರಿಸುವ ಶೌರ್ಯ ಶಿಕ್ಷಣದ ಸುಧಾರಣೆಯಲ್ಲಿ ತೋರಿಸಿ ಎಂದಿರುವ ಜೆಡಿಎಸ್ ಪ್ರಿಯಾಂಕ್ ಖರ್ಗೆಯನ್ನು ನಾಟಿಕೋಳಿ ಮಿನಿಸ್ಟರ್ ಎಂದು ವ್ಯಂಗ್ಯವಾಡಿದೆ.



