ಕುಕ್ಕೆ ಸುಬ್ರಹ್ಮಣ್ಯಕ್ಕೆ ಉದ್ಯಮಿಯಿಂದ 2 ಕೋಟಿ ರೂ. ಬೆಲೆಯ ಬೆಳ್ಳಿ ರಥ ಕಾಣಿಕೆ

0
14

Updated By: Priyalachhi

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಳ್ಯದ ಕುರುಂಜಿ ಡಾ.ರೇಣುಕಾ ಪ್ರಸಾದ್ ಮನೆಯವರು ಕೊಡುಗೆಯಾಗಿ ನೀಡಿದ ಎರಡು ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ರಥ ಬುಧವಾರ ಸಂಜೆ ಕ್ಷೇತ್ರ ತಲುಪಿತು.

ರಾಜಗೋಪಾಲ ಆಚಾರ್ಯ ಮತ್ತು ಲಕ್ಷ್ಮೀನಾರಾಯಣ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಭವ್ಯ ರಥವನ್ನು ಸಿದ್ಧಪಡಿಸಲಾಗಿದೆ. ಸುಮಾರು 18 ಅಡಿ ಉದ್ದವಿದ್ದು, ಮೇಲ್ಭಾಗದಲ್ಲಿ ಸುವರ್ಣ ಕಲಶವಿದೆ.

ನವೆಂಬರ್ 4ರಂದು ಆರಂಭಗೊಂಡ ಬೆಳ್ಳಿರಥದ ಯಾತ್ರೆ ಹಲವು ಹಳ್ಳಿಗಳು, ಪಟ್ಟಣಗಳ ಮೂಲಕ ಸಂಭ್ರಮದಿಂದ ಸಾಗಿ ಮಂಗಳವಾರ ಸುಳ್ಯ ತಲುಪಿತ್ತು. ಬೆಳಗ್ಗೆ ಅಲ್ಲಿಂದ ಹೊರಟ ಬೆಳ್ಳಿರಥ ನವೆಂಬರ್ 5ರ ಸಂಜೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ತಲುಪಿದೆ. ಆಗಮನದ ವೇಳೆ ಪುರೋಹಿತರ ನೇತೃತ್ವದಲ್ಲಿ ವಿಶೇಷ ಪೂಜೆ-ಹೋಮಗಳನ್ನು ನೆರವೇರಿಸಲಾಯಿತು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು, ತಂತ್ರಿಧಾರಿ ಪಂಡಿತರು ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಆಗಮಿಸಿದ ರಥದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿದ್ದರು.

ಅಧಿಕೃತವಾಗಿ ರಥ ಸಮರ್ಪಣೆ (ಹಸ್ತಾಂತರ) ಸಮಾರಂಭವು ನ.10ರಂದು ನಡೆಯಲಿದೆ. ಈ ಸಂದರ್ಭದಲ್ಲಿ ವಿಶೇಷ ಪೂಜಾ ವಿಧಿಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಕುರುಂಜಿ ಡಾ.ರೇಣುಕಾ ಪ್ರಸಾದ್ ಮನೆಯವರು, ರಥಶಿಲ್ಪಿಗಳು, ಸುಳ್ಯ ಕೆವಿಜಿ ವಿದ್ಯಾಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಊರ ಹಾಗೂ ಪರ ಊರ ನಾಗರಿಕರು, ಭಕ್ತಾ ಅಭಿಮಾನಿಗಳು ರಥದೊಂದಿಗೆ ಆಗಮಿಸಿದ್ದರು. ಕ್ಷೇತ್ರಕ್ಕೆ ಆಗಮಿಸಿದ ಬೆಳ್ಳಿ ರಥವನ್ನು ಶ್ರೀ ದೇವಳದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರು, ಸದಸ್ಯರು, ಕಾರ್ಯನಿರ್ವಹಣಾಧಿಕಾರಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ, ಮಾಸ್ಟರ್ ಪ್ಲಾನ್ ಸದಸ್ಯರು, ಅರ್ಚಕ ವರ್ಗದವರು ಹಾಗೂ ಸಿಬ್ಬಂದಿ ವರ್ಗದವರು ಬರಮಾಡಿಕೊಂಡರು.

ಇನ್ನು, ದೇವಾಲಯದ ಪ್ರಸಿದ್ಧ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಗೂಟ ಪೂಜೆ ಮತ್ತು ಪೂರ್ವಭಾವಿ ಧಾರ್ಮಿಕ ವಿಧಿಗಳು ಬುಧವಾರ ಕಾರ್ತಿಕ ಹುಣ್ಣಿಮೆ ದಿನ ಭಕ್ತಿಭಾವದ ವಾತಾವರಣದಲ್ಲಿ ಆರಂಭಗೊಂಡವು. ಈ ಅಂಗವಾಗಿ ದೇವರ ಬ್ರಹ್ಮರಥ ಮತ್ತು ಪಂಚಮಿರಥಗಳಿಗೆ ಗೂಟ ಪೂಜೆ ವೈದಿಕ ವಿಧಿವಿಧಾನ ಪೂಜಾಮಂತ್ರಗಳ ಮಧ್ಯೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕಾರ್ಯಕ್ರಮದ ಆರಂಭದಲ್ಲಿ ಕ್ಷೇತ್ರ ಪುರೋಹಿತರಾದ ಮಧುಸೂದನ ಕಲ್ಲೂರಾಯ ಅವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ ಗೂಟಗಳಿಗೆ ಪೂಜೆ ಜರುಗಿತು. ನಂತರ ದೇವರ ಪ್ರಸಾದವನ್ನು ಹಚ್ಚಿ ಶುದ್ಧೀಕರಣ ಕ್ರಮ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಮೂಲ ನಿವಾಸಿಗಳಾದ ಮಲೆಕುಡಿಯ ಸಮುದಾಯದವರು ತಮ್ಮ ಪಾರಂಪರಿಕ ಸಂಪ್ರದಾಯದಂತೆ ದೇವರ ಆರಾಧನೆ ಸಲ್ಲಿಸಿ, ರಥಗಳಿಗೆ ಗೂಟ ಅಳವಡಿಸುವ ಧಾರ್ಮಿಕ ವಿಧಿ ನೆರವೇರಿಸಿದರು. ಬಳಿಕ ಈ ಸಮುದಾಯವರು ರಥ ತಯಾರಿ ವಸ್ತುಗಳ ಸಂಗ್ರಹಣೆಯಲ್ಲಿ ತೊಡಗುತ್ತಾರೆ. ಈ ಪೂಜೆಯನ್ನು ಚಂಪಾ ಷಷ್ಠಿ ಜಾತ್ರೆಯ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ.

sambrama prabha editor suresh kt

LEAVE A REPLY

Please enter your comment!
Please enter your name here