ಆನೆ, ಚಿರತೆ, ಹುಲಿ, ಆಯ್ತು ಈಗ ಹಂದಿ ಕಾಟ: ಕಾಡು ಹಂದಿ ದಾಳಿಗೆ ರೈತ ಬಲಿ

0
23

Updated By: Priyalachhi

ಮೈಸೂರು: ಕಾಡು ಹಂದಿ ದಾಳಿಗೆ ರೈತನೊಬ್ಬ ಬಲಿಯಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದಲ್ಲಿ ನಡೆದಿದೆ. ಹುಲ್ಲಹಳ್ಳಿ ಹೋಬಳಿಯ ಹಾಡ್ಯ ಗ್ರಾಮದ ರೈತ ರಂಗಸ್ವಾಮಿ (35) ಕಾಡು ಹಂದಿ ದಾಳಿಗೆ ಬಲಿಯಾಗಿರುವ ಮೃತ ದುರ್ದೈವಿ.

ಆನೆ, ಚಿರತೆ, ಹುಲಿ ಕಾಟದ ಬಳಿಕ ಈಗ ಹಂದಿ ಕಾಟ ಹೆಚ್ಚಾಗಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಡ್ಯ ಗ್ರಾಮದಿಂದ ಬೈಕಿನಲ್ಲಿ ಹುರ ಎಂಬ ಗ್ರಾಮಕ್ಕೆ ಹೋಗಿ, ವಾಪಸ್ ಸ್ವಗ್ರಾಮಕ್ಕೆ ಬರುತ್ತಿರುವ ಸಂದರ್ಭದಲ್ಲಿ ರಸ್ತೆ ಬದಿಯ ಪೊದೆಯಲ್ಲಿ ಅಡಗಿದ್ದ ಕಾಡುಹಂದಿ ಬೈಕ್​ನಲ್ಲಿ ಬರುತ್ತಿದ್ದ ರಂಗಸ್ವಾಮಿ ಮೇಲೆ ಏಕಾಏಕಿ ದಾಳಿ ಮಾಡಿದೆ. ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಆಗಮಿಸಿ ನೋಡಿದಾಗ, ಕಾಡು ಹಂದಿ ಅರೆಬರೆ ತಿವಿದು, ಗಂಭೀರ ಗಾಯಗೊಳಿಸುತ್ತಿದ್ದು, ಸಾರ್ವಜನಿಕರನ್ನು ಕಂಡು ಪರಾರಿಯಾಗಿದೆ. ತಕ್ಷಣವೇ ರಂಗಸ್ವಾಮಿಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

ಘಟನೆ ಸಂಬಂಧ ಹುಲ್ಲಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯ ತಿಳಿದು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಹುಲ್ಲಹಳ್ಳಿ ಅರಣ್ಯ ಇಲಾಖೆ ವಿಭಾಗದ ಡಿಆರ್​ಎಫ್​ಒ ವಿನೋದ್ ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಮೃತ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಮೃತ ರಂಗಸ್ವಾಮಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯ: ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ರೈತ ರಂಗಸ್ವಾಮಿ ಎಂಬುವರು ಇವತ್ತು ಹಂದಿಯ ದಾಳಿಗೆ ಬಲಿಯಾಗಿದ್ದಾರೆ. ಮನುಷ್ಯರ ಮೇಲೆ ಕಾಡು ಪ್ರಾಣಿಗಳ ದಾಳಿಗಳು ಇಲ್ಲಿ ಪದೇ ಪದೆ ನಡೆಯುತ್ತಲೇ ಇವೆ. ಇದಕ್ಕೆ ಪ್ರಮುಖ ಕಾರಣ ಕಾಡಿನಲ್ಲಿ ತಲೆ ಎತ್ತುತ್ತಿರುವ ರೆಸಾರ್ಟ್​ ಹಾಗೂ ಸರ್ಕಾರ ನಡೆಸುತ್ತಿರುವ ಸಫಾರಿಗಳು. ಪ್ರಾಣಿಗಳ ಹಾವಳಿಗೆ ಹಾಗೂ ಅವುಗಳ ಕ್ರೂರ ಮನಸ್ಥಿತಿಗೆ ಬರುಲು ಇವುಗಳು ಮುಖ್ಯ ಕಾರಣ. ರೆಸಾರ್ಟ್ ಹಾಗೂ ಸಫಾರಿಗಳಿಂದ ಕಾಡಿನಲ್ಲಿ ಇರಬೇಕಾದ ಪ್ರಾಣಿಗಳು ನಾಡಿನತ್ತ ಬರುತ್ತಿವೆ. ಇದರಿಂದ ಪದೇ ಪದೆ ರೈತರ ಜೀವ ಹಾನಿ ಆಗುತ್ತಿವೆ. ಈಗಾಗಲೇ ಮೂರ್ನಾಲ್ಕು ಹುಲಿ ದಾಳಿ ಪ್ರಕರಣಗಳು ನಡೆದಿದ್ದು, ಇದೀಗ ಹಂದಿ ದಾಳಿ ನಡೆದಿದೆ. ಈ ಮೊದಲು ಅರಣ್ಯ ಸಚಿವರಿಗೆ ರೆಸಾರ್ಟ್​ ಹಾಗೂ ಸಫಾರಿಗಳನ್ನು ಬಂದ್​ ಮಾಡುವಂತೆ ಮನವಿ ಮಾಡಿಕೊಂಡಿದ್ದೆವು. ಜನರ ರಕ್ಷಣೆ ಮಾಡುವುದಾದರೆ ಅಧಿಕಾರಿಗಳು ಇಲ್ಲಿಗೆ ಬನ್ನಿ. ಹಂದಿ ದಾಳಿಯಿಂದ ಮೃತಪಟ್ಟ ರಂಗಸ್ವಾಮಿಗೆ ಕನಿಷ್ಠ 50 ಲಕ್ಷ ರೂ. ಪರಿಹಾರವನ್ನು ಸರ್ಕಾರದಿಂದ ಘೋಷಿಸಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷ ಸತೀಶ್ ರಾವ್ ಒತ್ತಾಯಿಸಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here