Updated By: Priyalachhi
ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಐತಿಹಾಸಿಕ ಶಿವನಸಮುದ್ರದ (ಬ್ಲಫ್) ಬಳಿ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಲುವೆಗೆ ಇಳಿದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯು ಎರಡು ದಿನಗಳ ಮಹತ್ವದ ಕಾರ್ಯಾಚರಣೆಯ ನಂತರ ಯಶಸ್ವಿಯಾಗಿ ಮೇಲೆತ್ತಿದೆ.
ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಪೂರೈಕೆ ಮಾಡುವ ಸುಮಾರು 50 ಅಡಿ ಅಳದ ಕೆನಾಲ್ ಗೇಟ್ ಮೂಲಕ ಶನಿವಾರ ರಾತ್ರಿ ಕಾಡಾನೆ ನೀರು ಕುಡಿಯಲು ಇಳಿದಿತ್ತು. ಆದರೆ, ನೀರಿನ ಹರಿವಿನ ರಭಸಕ್ಕೆ ವಾಪಸ್ ಕಾಲುವೆಯಿಂದ ಮೇಲೆ ಬರಲು ಸಾಧ್ಯವಾಗದೆ ಅದರೊಳಗೆ ಓಡಾಡುತ್ತಿತ್ತು. ಭಾನುವಾರ ಬೆಳಗ್ಗೆ ಆನೆಯ ಓಡಾಟವನ್ನು ಗಮನಿಸಿದ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಸಿಬ್ಬಂದಿ, ಆನೆ ವಾಪಸ್ ಹೋಗಬಹುದು ಎಂದು ಕಾದಿದ್ದರು. ಆದರೆ, ಭಾನುವಾರ ಸಂಜೆವರೆಗೂ ಕಾಡಾನೆ ಮೇಲಕ್ಕೆ ಬರಲಿಲ್ಲ. ಆಗ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಭಾನುವಾರವೂ ಸಹ ಕಾದ ಅಧಿಕಾರಿಗಳು, ಮೇಲೆ ಬರದಿರುವುದನ್ನು ಕಂಡು ಅದಕ್ಕೆ ಬೇಕಾದ ಆಹಾರವನ್ನು ಇಲ್ಲಿಂದಲೇ ಹಾಕಿದ್ದರು.
ಸೋಮವಾರ ಬೆಳಗ್ಗೆ ಕಾಲುವೆಯಿಂದ ಮೇಲೆತ್ತುವ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು, ಎಲ್ಲ ಪ್ರಯತ್ನದ ಬಳಿಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರು. ನಿನ್ನೆ ಸಂಜೆಯಾದರೂ ಆನೆಯು ಗೇಟ್‌ನಿಂದ ಹೊರಬರದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದಿಂದ ನೀರಿನ ಹರಿವಿನ ಪ್ರಮಾಣವನ್ನು ಕಡಿಮೆ ಮಾಡಲು ಜಿಲ್ಲಾಧಿಕಾರಿ ಕುಮಾರ ಅವರೊಂದಿಗೆ ಮಾತುಕತೆ ಸಹ ನಡೆಸಲಾಗಿತ್ತು. ಆನೆಯು ಆಹಾರವಿಲ್ಲದೇ ಆತಂಕದಲ್ಲಿರುವುದನ್ನು ಗಮನಿಸಿದ ಅಧಿಕಾರಿಗಳು, ಕಬ್ಬು ತರಿಸಿ ಕಾಲುವೆಗೆ ಹಾಕಿದ್ದರು. ಇಂದು ಆನೆಯ ಪ್ರಜ್ಞೆ ತಪ್ಪಿಸಿ ಕ್ರೇನ್ ಮೂಲಕ ಮೇಲೆತ್ತುವ ಪ್ರಯತ್ನಕ್ಕೆ ಮುಂದಾದರು. ಅದರಂತೆ ಎರಡು ಕ್ರೇನ್ಗಳನ್ನು ತರಿಸಿ ಆನೆಯನ್ನು ಕಾಲುವೆಯಿಂದ ಯಶಸ್ವಿಯಾಗಿ ಮೇಲೆತ್ತಿದ್ದಾರೆ.
ಅರವಳಿಕೆ ಮದ್ದು ನೀಡಿ ಕಾರ್ಯಾಚರಣೆ: ಆನೆಯನ್ನು ಕಾಲುವೆಯಿಂದ ಮೇಲೆತ್ತಲು ಅರಣ್ಯಾಧಿಕಾರಿಗಳು ಸಾಕಷ್ಟು ಹರಸಾಹಸ ಪಡಬೇಕಾಯಿತು. ಮೊದಲು ಅದಕ್ಕೆ ಬೇಕಾದ ಆಹಾರ ನೀಡಲಾಯಿತು. ಬಳಿಕ ಎರಡು ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಕೊನೆಗೂ ಆನೆಯನ್ನು ಕ್ರೇನ್ ಮೂಲಕ ಮೇಲೆತ್ತುವ ಕಾರ್ಯಾಚರಣೆ ನಡೆಯಿತು. ಈ ವೇಳೆ ಸ್ಥಳೀಯರು ಅರಣ್ಯಾಧಿಕಾರಿಗಳ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
12 ವರ್ಷದ ಗಂಡು ಆನೆಯು, ಸುಮಾರು 50 ಅಡಿ ಆಳದ ಕಾಲುವೆಯಲ್ಲಿ ಬಿದ್ದಿತ್ತು. ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಪಶು ವೈದ್ಯರ ತಂಡದ ವತಿಯಿಂದ ಸದರಿ ಆನೆಯನ್ನು ಸಂರಕ್ಷಿಸಲಾಗಿದೆ. ಆನೆಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ ಕಾಡಿಗೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಸಿಎಫ್ ರಘು, ವನ್ಯಜೀವಿ ವಲಯ ಮೈಸೂರು ವಿಭಾಗದ ಡಿಸಿಎಫ್ ಪ್ರಭು, ಸ್ಥಳೀಯ ತಹಶೀಲ್ದಾರ್ ಲೋಕೇಶ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.



