Updated By: Priyalachhi
ಮೈಸೂರು: ನಾನು ಈಗಲೂ ಸಹ ಮಾತಿಗೆ ತಪ್ಪಿಲ್ಲ, ಎಲ್ಲ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
“ಸಿದ್ದರಾಮಯ್ಯನವರು ಕೊಟ್ಟ ಮಾತಿಗೆ ತಪ್ಪಲ್ಲ” ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಇದೇ ಸಂದರ್ಭದಲ್ಲಿ, ರಾಜ್ಯದ ಮುಂದಿನ ಬಜೆಟ್ ಅನ್ನು ನಾನೇ ಮಂಡಿಸುತ್ತೇನೆ ಹಾಗೂ ಸಿಎಂ ಆಗಿಯೂ ನಾನೇ ಮುಂದುವರೆಯುತ್ತೇನೆ ಎಂದು ಪುನರುಚ್ಚರಿಸಿದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮಗಳ ಜೊತೆ ಸಿಎಂ ಮಾತನಾಡಿದರು.
ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಹೇಳಿದಂತೆ ನಾನೂ ಕೇಳಬೇಕು ಹಾಗೂ ಡಿ.ಕೆ.ಶಿವಕುಮಾರ್ ಮತ್ತು ಎಲ್ಲ ಶಾಸಕರು, ಸಚಿವರೂ ಕೇಳಬೇಕು ಎಂದರು.
ನಾಳೆ ಬೆಂಗಳೂರಿಗೆ ಬರುತ್ತಿರುವ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡುತ್ತೇನೆ. ಹೈಕಮಾಂಡ್ ಹೇಳಿದಂತೆ ನಾವೆಲ್ಲ ಕೇಳಬೇಕು. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಎಥನಾಲ್ ಉತ್ಪಾದನೆ, ಕಬ್ಬಿಗೆ ಎಂಎಸ್ಪಿ ದರ ನಿಗದಿ ಹಾಗೂ ರಾಜ್ಯಕ್ಕೆ ಬರಬೇಕಾದ ಪರಿಹಾರ ಹಣದ ಕುರಿತು ಚರ್ಚಿಸಿದ್ದೇನೆ ಎಂದು ಹೇಳಿದರು.
ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ಘೋಷಣೆ: ರಾಜ್ಯದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಾಗಿದೆ. ಈ ವರ್ಷ 55 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆಯಾಗುವ ಅಂದಾಜಿದೆ. ಇದರಿಂದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಇಳಿಕೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ರೈತರಿಗೆ 1 ಕ್ವಿಂಟಲ್ ಮೆಕ್ಕೆಜೋಳಕ್ಕೆ 2,400 ರೂ ಬೆಲೆ ನಿಗದಿ ಮಾಡಿದ್ದೇವೆ ಎಂದು ತಿಳಿಸಿದರು.
ಕೇಂದ್ರದಿಂದ 70 ಲಕ್ಷ ಮೆ.ಟನ್ ಮೆಕ್ಕೆಜೋಳ ಆಮದು: ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲೂ ಮೆಕ್ಕೆಜೋಳ ಉತ್ಪಾದನೆ ಹೆಚ್ಚಾಗಿದೆ. ಆದರೂ ಕೂಡ ಕೇಂದ್ರ ಸರ್ಕಾರವು ಸುಮಾರು 70 ಲಕ್ಷ ಮೆ.ಟನ್ ನಷ್ಟು ಮೆಕ್ಕೆಜೋಳ ಆಮದು ಮಾಡಿಕೊಳ್ಳುತ್ತಿದೆ. ಆದ್ದರಿಂದ ಕೇಂದ್ರವು ಮೆಕ್ಕೆಜೋಳ ಆಮದು ನಿಲ್ಲಿಸಬೇಕೆಂದು ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಮೆಕ್ಕೆಜೋಳ ಖರೀದಿಗೆ ಡಿಸ್ಟಿಲರಿಗಳೊಂದಿಗೆ ಚರ್ಚೆ: ಡಿಸ್ಟಿಲರಿಗಳು ಮೆಕ್ಕೆಜೋಳ ಬೆಲೆ ಕಡಿಮೆ ಇದ್ದಾಗಲೇ ಖರೀದಿಸಿ ಶೇಖರಣೆ ಮಾಡಿಕೊಂಡಿವೆ. ಮೆಕ್ಕೆಜೋಳವನ್ನು ನಿಯಮಾನುಸಾರ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸಲು ಡಿಸ್ಟಿಲರಿ ಮಾಲೀಕರೊಂದಿಗೆ ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸರ್ಕಾರದಿಂದ 10 ಲಕ್ಷ ಮೆ.ಟನ್ ಖರೀದಿ: ಮೆಕ್ಕೆಜೋಳದ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಎಲ್ಲ ರೀತಿಯ ಸಹಾಯವನ್ನು ಸರ್ಕಾರ ಮಾಡಲಿದೆ. ರಾಜ್ಯ ಸರ್ಕಾರ, ರೈತರಿಂದ ಸುಮಾರು 10 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ಸ್ಥಾಪಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬೆಳೆಹಾನಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ: ಮೆಕ್ಕೆಜೋಳದ ಜೊತೆಗೆ ಹೆಸರು ಕಾಳು ಬೆಳೆ ಸಮಸ್ಯೆ ಬಗ್ಗೆ ಚರ್ಚಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಎಫ್‌ಎಕ್ಯು ಬದಲಾವಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಜೊತೆಗೆ ಸಂಬಂಧಪಟ್ಟ ತಂಡ ಈ ಬಗ್ಗೆ ದೆಹಲಿಗೂ ಭೇಟಿ ನೀಡಬೇಕೆಂದು ಸೂಚನೆ ನೀಡಲಾಗಿದೆ. ಇತ್ತೀಚೆಗೆ ಪ್ರಧಾನಿಯವರನ್ನು ಭೇಟಿಯಾಗಿ ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ಕೋರಲಾಗಿದೆ. ಈ ಬಾರಿ ರಾಜ್ಯದಲ್ಲಿ ಸುಮಾರು 15.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ರಾಜ್ಯದ ಮನವಿಗೆ ಕೇಂದ್ರ ಪೂರಕವಾಗಿ ಸ್ಪಂದಿಸಲಿದೆ ಎಂಬ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.



