ಭಾರತದ ಹಾಕಿಗೆ 100ರ ಸಂಭ್ರಮ

0
48

Updated By: Priyalachhi

Indian Hockey History: ಇಂದು ದೇಶದೆಲ್ಲೆಡೆ ಹಾಕಿ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. 100 ವರ್ಷಗಳ ಹಿಂದೆ ಅಂದರೆ 1925ರಲ್ಲಿ ಇದೇ ದಿನದಂದು ಭಾರತ ಅಂತಾರಾಷ್ಟ್ರೀಯ ಹಾಕಿಗೆ ಪ್ರವೇಶ ಮಾಡಿತ್ತು. ಇದೀಗ ಯಶಸ್ವಿಯಾಗಿ ನೂರು ವರ್ಷಗಳನ್ನು ಪೂರೈಸುತ್ತದೆ.

ಈ ಕ್ರೀಡೆ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತನ್ನು ತಂದುಕೊಟ್ಟಿದೆ. ಇದು ಅನೇಕ ಸಿಹಿ ನೆನಪುಗಳನ್ನು ನೀಡಿದೆ. ಒಲಿಂಪಿಕ್ಸ್‌ನಲ್ಲಿ ದೇಶವನ್ನು ಹೆಮ್ಮೆಪಡುವಂತೆ ಮಾಡಿದೆ. ಅಲ್ಲದೇ ಭಾರತ ಹಾಕಿ ವಿಶ್ವಕ್ಕೆ ಅನೇಕ ದಂತಕಥೆ ಆಟಗಾರರನ್ನು ನೀಡಿದೆ. ಆದರೇ ಇತ್ತೀಚೆನ ದಿನಗಳಲ್ಲಿ ಕ್ರಿಕೆಟ್​ ಪ್ರಭಾವದಿಂದಾಗಿ ಇದರ ಕ್ರೇಜ್​ ಕಡಿಮೆ ಆಗಿದೆ. ಒಂದು ಕಾಲದಲ್ಲಿ ಹಾಕಿ ಈ ದೇಶದ ಹೃದಯಬಡಿತವಾಗಿತ್ತು. ಇಂದಿಗೂ ಹಾಕಿಯನ್ನು ಪ್ರೀತಿಸುವ ಅದೇಷ್ಟೊ ಅಭಿಮಾನಿಗಳು ದೇಶದಲ್ಲಿದ್ದಾರೆ. ಹಾಗಾದರೆ ಹಾಕಿ ಕುರಿತಾದ ಕೆಲ ಆಸಕ್ತಿಕರ ವಿಷಯಗಳನ್ನು ಈ ಲೇಖನದಲ್ಲಿ ತಿಳಿಯೋಣ.

ಐಎಚ್ಎಫ್ಸ್ಥಾಪನೆ: ಅದು ನವೆಂಬರ್ 1925. ಭಾರತೀಯ ಹಾಕಿಗಾಗಿ ಆಡಳಿತ ಮಂಡಳಿಯನ್ನು ರಚಿಸಲು ಕೆಲವರು ಗ್ವಾಲಿಯರ್‌ನಲ್ಲಿ ಸಭೆ ಸೇರಿದ್ದರು. ಹಾಗೆ ಐಎಚ್‌ಎಫ್ (ಈಗಿನ ಹಾಕಿ ಇಂಡಿಯಾ) ಪ್ರಾರಂಭವಾಯಿತು. IHF ಅನ್ನು ನವೆಂಬರ್ 7, 1925 ರಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (FIH) ಗುರುತಿಸಿತು. ಅದಾದ ನಂತರ, ಭಾರತ ಹಾಕಿಯಲ್ಲಿ ಬೆಳೆದ ರೀತಿ ಅಸಾಧಾರಣವಾಗಿದೆ.

ಮೂರು ವರ್ಷಗಳಲ್ಲಿ, ಆಮ್ಸ್ಟರ್‌ಡ್ಯಾಮ್ (1928) ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾಗಿಯಾದ ಭಾರತ ಅಲ್ಲಿ ಚಿನ್ನದ ಪದಕ ಗೆದ್ದು ಬಲಿಷ್ಠ ತಂಡವಾಗಿ ವಿಶ್ವವಿಖ್ಯಾತ ಪಡೆದುಕೊಂಡಿತು. ಅದಾದ ನಂತರ ಪ್ರತಿ ಟೂರ್ನಿಯಲ್ಲಿ ಗೆಲುವಿನೊಂದಿಗೆ ಚರಿತ್ರೆ ಸೃಷ್ಟಿಸಿತು. ವಾಸ್ತವವಾಗಿ, ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತವನ್ನು ತಲುಪಿದ ಹಾಕಿ, ಕಡಿಮೆ ಸಮಯದಲ್ಲಿ ಜನಪ್ರಿಯತೆಯನ್ನು ಗಳಿಸಿತು. ಆದರೆ, ಅದಕ್ಕೆ ಯಾವುದೇ ವ್ಯವಸ್ಥೆ ಇರಲಿಲ್ಲ. ಹಾಕಿ ಫೆಡರೇಶನ್ ರಚನೆಯೊಂದಿಗೆ, ದೇಶದಲ್ಲಿ ಹಾಕಿ ಉತ್ತಮ ಉತ್ತೇಜನವನ್ನು ಪಡೆದುಕೊಂಡಿತು. ಭಾರತವು ಇಲ್ಲಿಯವರೆಗೆ ಹಾಕಿಯಲ್ಲಿ 8 ಚಿನ್ನದ ಪದಕಗಳನ್ನು ಒಳಗೊಂಡಂತೆ 13 ಒಲಿಂಪಿಕ್ ಪದಕಗಳನ್ನು ಗೆದ್ದಿದೆ. ಒಮ್ಮೆ ವಿಶ್ವಕಪ್ ಸಹ ಗೆದ್ದುಕೊಂಡಿದೆ. 2024ರ ಒಲಿಂಪಿಕ್ಸ್‌ನಲ್ಲೂ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿದೆ.

ತನ್ನ ಆಟದಿಂದ ಜಗತ್ತನ್ನು ಮೋಡಿ ಮಾಡಿದ ಭಾರತೀಯ ಹಾಕಿ ತಂಡವು ಕ್ರಮೇಣ ತನ್ನ ಗುಣಮಟ್ಟ ಮತ್ತು ಪ್ರತಿಷ್ಠೆಯನ್ನು ಕಳೆದುಕೊಂಡಿದೆ. 1975 ರಲ್ಲಿ FIH ನಿಂದ ಆಸ್ಟ್ರೋ ಟರ್ಫ್ ಅನ್ನು ಪರಿಚಯಿಸಿದ್ದು, ಭಾರತೀಯ ಆಟಕ್ಕೆ ಹಿನ್ನಡೆ ಉಂಟುಮಾಡಿತು. ತಂಡವು ಟರ್ಫ್‌ನಲ್ಲಿ ಆಡಲು ಬೇಗನೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಹಣದ ಕೊರತೆಯಿಂದಾಗಿ, ಹಾಕಿ ಫೆಡರೇಶನ್ ದೇಶದಲ್ಲಿ ಹಾಕಿ ಟರ್ಫ್‌ಗಳನ್ನು ಸ್ಥಾಪಿಸುವಲ್ಲಿ ಬಹಳ ತಡವಾಗಿತ್ತು. ಇದರಿಂದಾಗಿ ಭಾರತೀಯ ತಂಡವು 1984 ರಿಂದ 2016 ರವರೆಗೆ ಒಂದೇ ಒಂದು ಒಲಿಂಪಿಕ್ ಪದಕವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆ ಅವಧಿಯಲ್ಲಿ, ಅದು ಒಮ್ಮೆ ಮಾತ್ರ ಗುಂಪು ಹಂತವನ್ನು ದಾಟಿತು. ಅದರಲ್ಲೂ 2008ರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯದಿರುವುದು ಭಾರತೀಯ ಹಾಕಿಯ ಇತಿಹಾಸದಲ್ಲೇ ಅಳಿಸಲಾಗದ ಕಪ್ಪು ಚುಕ್ಕೆಯಾಗಿದೆ. ಮತ್ತೊಂದೆಡೆ, ದೇಶದಲ್ಲಿ ಕ್ರಿಕೆಟ್‌ನ ಮೇಲಿನ ಉತ್ಸಾಹ ಹೆಚ್ಚಾದಂತೆ ಹಾಕಿ ಕಡೆಗಣಿಸಲಾಗುತ್ತಿದೆ ಎಂಬ ಕೂಗುಗಳು ಕೇಳಿ ಬರಲಾರಂಭಿಸಿವೆ. ಆದಾಗ್ಯೂ, ಕಳೆದ ಹತ್ತು ವರ್ಷಗಳಲ್ಲಿ ಭಾರತ ಕಮ್​ಬ್ಯಾಕ್​ ಮಾಡಲು ಪ್ರಾರಂಭಿಸಿದೆ. 2016ರಲ್ಲಿ ಪದಕ ಗೆಲ್ಲದಿದ್ದರೂ.. ಕ್ವಾರ್ಟರ್ ಫೈನಲ್ ತಲುಪಿದ್ದು ಸಕಾರಾತ್ಮಕ ಅಂಶವಾಗಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ (ಕಂಚು) ಗೆಲ್ಲುವ ಮೂಲಕ 40 ದಶಕಗಳ ಬರಗಾಲವನ್ನು ಕೊನೆಗೊಳಿಸಿದ ಭಾರತ ತಂಡ. ತನ್ನ ಹಿಂದಿನ ವೈಭವದತ್ತ ಮೊದಲ ಹೆಜ್ಜೆ ಇಟ್ಟಿದೆ.

ಅಲ್ಲದೇ ಪ್ಯಾರಿಸ್ (2024) ಕ್ರೀಡಾಕೂಟದಲ್ಲೂ ಕಂಚು ಗೆದ್ದು ಉಜ್ವಲ ಭವಿಷ್ಯದ ಭರವಸೆಯನ್ನು ಮೂಡಿಸಿದೆ. ಭಾರತ ಈಗ ನಂಬರ್ ಒನ್ ತಂಡವಲ್ಲದಿದ್ದರೂ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಪ್ರದರ್ಶನ ನೀಡುತ್ತಿರುವ ನಮ್ಮ ತಂಡವು ತನ್ನ ಹಿಂದಿನ ಶಕ್ತಿಯನ್ನು ಮರಳಿ ಪಡೆದುಕೊಳ್ಳುತ್ತಿದೆ.

ಸುವರ್ಣಯುಗ: ಭಾರತ ಹಾಕಿಯಲ್ಲಿ ತೋರಿಸಿದ ಪ್ರಾಬಲ್ಯವನ್ನು ಬೇರೆ ಯಾವುದೇ ಕ್ರೀಡೆಯಲ್ಲಿ ಪ್ರದರ್ಶಿಸಲಾಗಿಲ್ಲ ಎಂದು ಹೇಳುವುದು ಅತಿಶಯೋಕ್ತಿಯಲ್ಲ. 1926ರಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ಪ್ರವಾಸದಲ್ಲಿ, ನ್ಯೂಜಿಲೆಂಡ್‌ನಲ್ಲಿ 21 ಪಂದ್ಯಗಳಲ್ಲಿ 18 ಪಂದ್ಯಗಳನ್ನು ಗೆದ್ದಿತು. ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಪದಾರ್ಪಣೆ ಮಾಡಿದ್ದು ಇಲ್ಲೇ. ಮೊದಲ ಪ್ರವಾಸದ ಆರಂಭದಿಂದ, ಭಾರತೀಯ ತಂಡ ಹಿಂತಿರುಗಿ ನೋಡಲಿಲ್ಲ. ಸಂಪೂರ್ಣ ಪ್ರಾಬಲ್ಯದೊಂದಿಗೆ ಯಾವುದೇ ತಂಡವನ್ನು ಸೋಲಿಸುವ ಮೂಲಕ ಅದು ವಿಶ್ವ ಹಾಕಿಯನ್ನು ಆಳಿತು.

1928 ರಿಂದ 1956 ರವರೆಗೆ ಇದು ಸತತ ಆರು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದಿತು. ಅಂತಹ ಪ್ರಾಬಲ್ಯವನ್ನು ಪ್ರದರ್ಶಿಸಲು ಬೇರೆ ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ. 1964 ಮತ್ತು 1980ರ ಒಲಿಂಪಿಕ್ಸ್‌ನ ವಿಜೇತ ಭಾರತವು 1975 ರಲ್ಲಿ ವಿಶ್ವಕಪ್ ಗೆದ್ದಿತು. ಧ್ಯಾನ್ ಚಂದ್ ಮತ್ತು ಬಲ್ಬೀರ್ ಸಿಂಗ್ ಅವರಂತಹ ದಂತಕಥೆಯ ಆಟಗಾರರು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here